ಪೆನ್ಸಿಲ್ ಬಗ್ಗೆ ನಿಮಗೆಷ್ಟು ಗೊತ್ತು? ಒಂದಿಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ!
ಅಂದಹಾಗೆ, `ಪೆನ್ಸಿಲ್' ಪದದ ಮೂಲ ಗೊತ್ತೆ? ಅದರ ಮೂಲ ಲ್ಯಾಟಿನ್ ಭಾಷೆಯ `ಪೆನಿಸಿಲಸ್'. ಹಾಗೆಂದರೆ `ಚಿಕ್ಕ ಬಾಲ' ಎಂದರ್ಥ!!
1564ರಲ್ಲಿ ಇಂಗ್ಲೆಂಡಿನಲ್ಲಿ ಗ್ರಾಫೈಟ್ ಪತ್ತೆಯಾಯಿತು. 1565ನಲ್ಲಿ ಪೆನ್ಸಿಲ್ ರೂಪಿಸಲಾಯಿತು. 1662ರಲ್ಲಿ ಜರ್ಮನಿಯ ಫ್ಯಾಕ್ಟರಿಯಲ್ಲಿ ಪೆನ್ಸಿಲ್ ಉತ್ಪಾದನೆ ಆರಂಭವಾಯಿತು. 1795ರಲ್ಲಿ ನಿಕೋಲಸ್ ಜಾಕ್ ಕಾಂಟೆ ಜೇಡಿಮಣ್ಣು ಹಾಗೂ ಗ್ರಾಫೈಟ್ ಮಿಶ್ರಮಾಡಿದ ಪೆನ್ಸಿಲ್ ತಯಾರಿಕೆಯ ಪೇಟೆಂಟ್ ಪಡೆದ.
ಹಿಂದೆ ಬರೆಯಲು ಲೆಡ್ (ಸೀಸ) ಕಡ್ಡಿ ಬಳಸುತ್ತಿದ್ದರು. ಪೆನ್ಸಿಲ್ ತುದಿಯನ್ನು ನಾವು ಈಗಲೂ `ಲೆಡ್' ಎನ್ನುತ್ತೇವಾದರೂ ಅದು ಲೆಡ್ ಅಲ್ಲ, ಗ್ರಾಫೈಟ್. ಹೀಗಾಗಿ ಪೆನ್ಸಿಲ್ ಚುಚ್ಚಿಕೊಂಡು ಗಾಯವಾದರೂ ಸೀಸದ ವಿಷ ಸೋಂಕುವ ಭಯವಿಲ್ಲ.
1828ರಲ್ಲಿ ಪೆನ್ಸಿಲ್ ಶಾರ್ಪನರ್ ರೂಪಿಸಿದವನ ಹೆಸರು ಬರ್ನಾಡ ಲಾಸಸಿಮೋನ್. 1847ರಲ್ಲಿ ಥೆರಿ ಡಿಸ್ ಎಸ್ಟ್ವಾಕ್ಸ್ ಉತ್ತಮ ಶಾರ್ಪನರ್ ಗಳನ್ನು ಅಭಿವೃದ್ಧಿಪಡಿಸಿದ. ಇವರಿಬ್ಬರೂ ಪ್ರಾನ್ಸ್ ನವರು. ಅದೇ ದೇಶದ ಸಂಶೋಧಕರು ಪೆನ್ಸಿಲ್ ಗುರುತು ಅಳಿಸುವ `ರಬ್ಬರ್' ರೂಪಿಸಿದರು.
ಆರಂಭದಲ್ಲಿ ಪೆನ್ಸಿಲ್ಲಿಗೆ ಬಣ್ಣ ಹಾಕುತ್ತಿರಲಿಲ್ಲ. ಕಾರಣ ಅದರಲ್ಲಿ ಬಳಕೆಯಾಗಿರುವ ಉತ್ತಮ ಗುಣಮಟ್ಟದ ಮರದ ಕವಚದ ಪ್ರದರ್ಶನ! ಆದರೆ 1890ರ ಹೊತ್ತಿಗೆ ಪೆನ್ಸಿಲ್ ಗಳ ಮೇಲೆ ಬಣ್ಣದ ವಿನ್ಯಾಸ ಮಾಡಿ ಬ್ರಾಂಡ್ ನೇಮ್ ಬಳಸುವ ರೂಢಿಯನ್ನು ತಯಾರಿಕಾ ಕಂಪೆನಿಗಳು ಆರಂಭಿಸಿದವು.
18ನೇ ಶತಮಾನದಲ್ಲಿ ಉತ್ತಮ ಗ್ರಾಫೈಟ್ ಚೀನಾದಿಂದ ಸರಬರಾಜಾಗುತ್ತಿತ್ತು. ತಮ್ಮ ಪೆನ್ಸಿಲ್ ನಲ್ಲಿ ಚೀನಾ ಗಾಫೈಟ್ ಇದೆ ಎಂದು ಹೇಳಿಕೊಳ್ಳಲು ಕೆಲವು ಕಂಪೆನಿಗಳು ಪೆನ್ಸಿಲ್ ಮೇಲೆ ಹಳದಿ ಗೆರೆ ಹಾಕುತ್ತಿದ್ದವು (ಚೀನಾದಲ್ಲಿ ಹಳದಿ ವರ್ಣಕ್ಕೆ ವಿಶೇಷ ಗೌರವ ಇತ್ತು). ಈಗಲೂ ಬಹುತೇಕ ಪೆನ್ಸಿಲ್ ಗಳ ಮೇಲೆ ಹಳದಿ ಗೆರೆಗಳಿವೆ!!
ಪೆನ್ಸಿಲ್ ಗಳಿಂದ ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲೂ ಬರೆಯಬಹುದು! ಇಂಕ್ ಪೆನ್ನುಗಳಿಂದ ಸಾಧ್ಯವಿಲ್ಲ.
ಜಗತ್ತಿನ ಅತಿ ದೊಡ್ಡ ಪೆನ್ಸಿಲ್ `ಕ್ಯಾಸ್ಟೆಲ್ 9000' ಮಲೇಷಿಯಾದ ಕ್ವಾಲಾಲಂಪುರ್ ಬಳಿ ಪ್ರದರ್ಶನಕ್ಕಿದೆ. ಅದರ ಎತ್ತರ 85 ಅಡಿ!!
ರಜೆಯಲ್ಲಿ ಮಾಡಲು ಯಾವ ಕೆಲಸವೂ ಇಲ್ಲವೆ? ಒಂದು ಹೊಸ ಪೆನ್ಸಿಲ್ ತೆಗೆದುಕೊಳ್ಳಿ. ಅದು ಮುಗಿಯುವವರೆಗೂ ಬರೆಯಲು ಆರಂಭಿಸಿ. ಅದರಲ್ಲಿ 45,000 ಪದಗಳನ್ನು ಬರೆಯಬಹುದು. ಅಥವಾ ಗೆರೆ ಎಳೆದುಕೊಂಡು ಹೊರಡಿ. 56 ಕಿಲೋಮೀಟರ್ ಗೆರೆ ಎಳೆಯಬಹುದು! ಯಾರೂ ಇನ್ನೂ ಈ ದಾಖಲೆ ನಿರ್ಮಿಸಿಲ್ಲ!!
ಈಗ ಜಗತ್ತಿನಲ್ಲಿ ಉತ್ಪಾದಿಸುವ ಪೆನ್ಸಿಲ್ ಗಳಲ್ಲಿ ಅರ್ಧಭಾಗವನ್ನು ಬರೀ ಚೀನಾ ಒಂದೇ ಉತ್ಪಾದಿಸುತ್ತದೆ. 2004ರಲ್ಲಿ ಚೀನಾ ಫ್ಯಾಕ್ಟರಿಗಳು ತಯಾರಿಸಿದ ಪೆನ್ಸಿಲ್ ಗಳ ಸಂಖ್ಯೆ 1000 ಕೋಟಿ! ಇಷ್ಟು ಪೆನ್ಸಿಲ್ ಗಳಿಂದ ಇಡೀ ಭೂಗೋಳದ ಸುತ್ತ 40 ಬಾರಿ ಗೆರೆ ಎಳೆಯಬಹುದು!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ