ಆಗ 6, 2011

ಬರಲಿದೆ ಬಿದಿರಿನ ಹೆಲ್ಮೆಟ್



ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಬೇಕೋ ಬೇಡವೋ ಎಂಬ ಸಂದಿಗ್ಧದಲ್ಲಿ ಸರ್ಕಾರ ಹಲವು ಬಾರಿ ಕಾನೂನನ್ನು ಬದಲಿಸಿದೆ. ಆದರೆ ಬೈಕ್ ಸವಾರರು ಹೆಲ್ಮೆಟ್ ತೊಡದೇ ಇರಲು ನೀಡುವ ಕಾರಣಗಳು ಹಲವಾರು. ಹೆಲ್ಮೆಟ್ ಧರಿಸುವುದರಿಂದ ಹೆಚ್ಚುವ ಬಿಸಿ, ಕೆದರುವ ಕೂದಲು ಮೊದಲಾದವು. ಅದೂ ಅಲ್ಲದೇ ಹೆಲ್ಮೆಟ್ ತಯಾರಿಸಲು ಬೇಕಾದ ಕಚ್ಚಾಸಾಮಾಗ್ರಿಗಳು ಪರ್ಯಾವರಣಕ್ಕೆ ಮಾರಕ.

ಈ ನಿಟ್ಟಿನಲ್ಲಿ ಬ್ರಿಟನ್ನಿನ ರೂಫ್ ಸಂಸ್ಥೆ ಸಂಪೂರ್ಣ ಪರಿಸರಸ್ನೇಹಿ ಹೆಲ್ಮೆಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದ ರೂಫ್ ಆರ್.ಒ.ಸಿಕ್ಸ್ ಎಂಬ ಹೆಸರಿನ ಈ ಹೆಲ್ಮೆಟ್ಟನ್ನು ಬಿದಿರಿನಿಂದ ತಯಾರಿಸಿದ್ದು ಒಳಭಾಗವನ್ನು ಹತ್ತಿಯಿಂದ ನಿರ್ಮಿಸಲಾಗಿದೆ. ಈ ಹತ್ತಿಯ ವಿಶೇಷ ವಿನ್ಯಾಸದಿಂದ ತಲೆಬುರುಡೆಗೆ ಅಗತ್ಯವಾದ ಗಾಳಿ ಲಭಿಸಲಿದ್ದು ಹೆಚ್ಚಿನ ಆರಾಮ ನೀಡಲಿದೆ.
ತಲೆಬುರುಡೆಯ ಮೇಲೆ ಹೆಲ್ಮೆಟ್ ಧೃಢವಾಗಿ ಕೂರಲು ಅನುಕೂಲವಾಗುವಂತೆ ಇದರ ಪಟ್ಟಿಯನ್ನೂ ಸೀಟ್ ಬೆಲ್ಟ್ ಮಾದರಿಯಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣವಾಗಿ ತಿರುಗಬಲ್ಲ ಬೈಫೋಕಲ್ ಮಸೂರ ಯಾವುದೇ ಋತುಮಾನದಲ್ಲಿಯೂ ಚಾಲಕನಿಗೆ ಸ್ಪಷ್ಟದರ್ಶನ ನೀಡುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ಮಾದರಿಗಿಂತಲೂ ಈ ಮಾದರಿ ಚಾಲಕನಿಗೆ ಹೆಚ್ಚಿನ ಆರಾಮ ಹಾಗೂ ಸುರಕ್ಷತೆ ನೀಡುತ್ತದೆ ಎಂದು ಸಂಸ್ಥೆ ಪ್ರತಿಪಾದಿಸಿದೆ.
ಬ್ರಿಟನ್ನಿನ ಉತ್ಕೃಷ್ಟತಾ ಪರೀಕ್ಷೆಯಾದ ಇ-22-05 ಪರೀಕ್ಷೆಯನ್ನೂ ಈ ಹೆಲ್ಮೆಟ್ ಯಶಸ್ವಿಯಾಗಿ ತೇರ್ಗಡೆಯಾಗಿದೆ. ಹೊಸತಾಗಿ ಬರುತ್ತಿರುವುದರಿಂದ ಬೆಲೆ ಕೊಂಚ ಹೆಚ್ಚಾಗಿದ್ದರೂ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ಪಾದನೆ ಬೆಲೆಯನ್ನು ಕಡಿಮೆಗೊಳಿಸಲೂ ಬಹುದು
ಅಂದ ಹಾಗೆ ನಮ್ಮ ಮಲೆನಾಡಿನಲ್ಲಿ ಅಡಿಕೆ ಹಾಳೆಯ ಹೆಲ್ಮೆಟ್ ಒಂದು ಶತಮಾನಗಳಿಂದ ತಲೆಗಳನ್ನು ರಕ್ಷಿಸುತ್ತಾ ಬಂದಿದ್ದು ಈ ಸಂಸ್ಥೆಗೆ ತಿಳಿಯಲಿಲ್ಲವೇನೋ, ಗೊತ್ತಿದ್ದಿದ್ದರೆ ಬಿದಿರಿನ ಬದಲಿಗೆ ಅಡಿಕೆ ಹಾಳೆಗೂ ಕಾಯಕಲ್ಪ ಒದಗುತ್ತಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ