ಪ್ರೀಯ ಗೆಳಯರೆ ನಾನು ನಿಮ್ಮ ನಾಗಾರ್ಜುನ್ ಎಂ ಬೆಳಗೆರೆ , ನಾನು ಈ ಬ್ಲಾಗ್ ನ್ನು ನನ್ನ ಹೈಸ್ಕುಲ್ ಗೆಳಯರಿಗೆ ಮತ್ತು ಡಿಇಡಿ ಗೆಳಯರ ಬಳಗಕ್ಕೆ . ನನ್ನ ತಂದೆ ಮಂಜಯ್ಯ್ ಕೆ ಬಿ ಮತ್ತು ತಾಯಿ ರಾಧ ಕೆ ಇವರಿಗೆ ಅರ್ಪಿಸುತ್ತೆನೆ
ಮಾರ್ಚ್ 28, 2012
ಕನ್ನಡಿಗರಿಗೆ ಏರ್‌ಟೆಲ್ ನಾಮ !
ಕನ್ನಡಿಗರಿಗೆ ಏರ್‌ಟೆಲ್ ನಾಮ !
ನಾನು ಏಳೆಂಟು ವರ್ಷದಿಂದ ಏರ್‌ಟೆಲ್ ಪ್ರೀಪೇಡ್ ಮೊಬೈಲ್ ಸಿಮ್‌ಕಾರ್ಡ್ ಉಪಯೋಗಿಸುತ್ತಿದ್ದೇನೆ. ಮೂರ್ನಾಲ್ಕು ವರ್ಷದಿಂದ ಮತ್ತೊಂದು ಪೋಸ್ಟ್‌ಪೇಡ್ ಸಿಮ್‌ಕಾರ್ಡ್ ಉಪಯೋಗಿಸುತ್ತಿದ್ದೇನೆ. ಒಂದು ವರ್ಷದಿಂದ ಏರ್‌ಟೆಲ್ ಡಿಶ್ ಟಿವಿ ಉಪಯೋಗಿಸುತ್ತಿದ್ದೇನೆ. ಆದರೂ ಇವರ ಸೇವೆ ನನಗೆ ತೃಪ್ತಿದಾಯಕವಾಗಿಲ್ಲ.
ಪ್ರಿಪೇಡ್ ಸಿಮ್‌ನಲ್ಲಿ ಈ ಹಿಂದೆ ಆಗಾಗ ಇದ್ದಕ್ಕಿದ್ದಂತೆ ದುಡ್ಡು ಕಟಾವು ಆಗುತಿತ್ತು. ಕೇಳಿದರೆ ನೀವು "ಅದನ್ನು ಆಯ್ಕೆ ಮಾಡಿದ್ದೀರಿ, ಇದನ್ನು ಒತ್ತಿದ್ದೀರಿ" ಎಂದು ಕಾಗೆ ಹಾರಿಸುತ್ತಿದ್ದರು. ಒಂದು ಸಲ ಜಗಳ ಮಾಡಿದ ನಂತರ ಕಟಾವು ಆದ ಹಣ ಹಿಂದಿರುಗಿಸಿದ್ದರು. ಯಾವುದಾದರೂ ವಿಷಯವನ್ನು ನೀವು ಪಟ್ಟು ಹಿಡಿದು ಕೇಳಿದರೆ, "ಸರ‍್ ಅರ್ಧ ಗಂಟೆಯಲ್ಲಿ ಸರಿ ಮಾಡಿ ಕೊಡುತ್ತೇವೆ", ಎಂದು ಹೇಳುತ್ತಾರೆ. ಅರ್ಧ ಗಂಟೆ ಕಳೆದ ನಂತರ ಮತ್ತೆ ಕರೆ ಮಾಡಿದರೆ ’ಗ್ರಾಹಕ ಸೇವಾ ಪ್ರತಿನಿಧಿ’ಗಳಿಗೆ ಕರೆ ಹೋಗುವುದೇ ಇಲ್ಲ. ಕಂಪ್ಯೂಟರ‍್ ಆಂಟೀ "ಒಂದು ಒತ್ತಿ, ಎರಡು ಒತ್ತಿ, ಅದನ್ನು ಒತ್ತಿ, ಇದನ್ನು ಒತ್ತಿ’ ಎಂದು ನಮ್ಮ ಸಮಯ ತಿನ್ನುತ್ತಾಳೇಯೇ ಹೊರತೂ, ’ಒಂಬತ್ತು ಒತ್ತಿ’ ಎಂದು ಹೇಳುವುದೇ ಇಲ್ಲ. ಸುಮಾರು ಹದಿನೈದು ದಿನ ನಾವು ಏನೇ ತಿಪ್ಪರಲಾಗ ಹಾಕಿದರೂ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅಷ್ಟರಲ್ಲಿ ಆ ವಿಷಯವೇ ಮರೆತು ಹೋಗಿರುತ್ತದೆ.
ಎರಡು ವರ್ಷದ ಹಿಂದೆ ಟ್ರಾಯ್ ಸೂಚನೆ ಮೇರೆಗೆ "ಆಜೀವ ಸದಸ್ಯತ್ವ" ಎಂದು ಹೇಳಿ ರೂ. 1,200/- ಕಟ್ಟಿಸಿಕೊಂಡರು. ಆಗಲೂ ’ಆಜೀವ ಎಂದರೆ ಎಷ್ಟು ದಿನ?" ಎಂದು ಕೇಳಿದ್ದೆ. "ನೀವು ಜೀವಂತ ಇರುವವರೆಗೆ" ಎಂದು ತಿಳಿಸಿದ್ದರು. ನಾನೂ ಖುಷಿ ಆಗಿದ್ದೆ. ಆದರೆ ಈಗ ಅದು ಕೊನೆಗೊಳ್ಳುವ ದಿನಾಂಕವನ್ನು ಪರಿಶೀಲಿಸಿದರೆ 22 ಮೇ 2012 ಎಂದು ತೋರಿಸುತ್ತಿದೆ. ಅಂದರೆ ಏರ್‌ಟೆಲ್‌ನವರ ಪ್ರಕಾರ ನಾನು ಸಾಯಲು ಇನ್ನೆರಡೇ ತಿಂಗಳು ಬಾಕಿ ! ಇವರೇ ಬೇಗನೆ ಒಂದು ಪ್ರಳಯ ಮಾಡುತ್ತಾರೋ ಏನೋ !? ಅಥವಾ ಸುಪಾರಿ ಕೊಟ್ಟು ನನ್ನನ್ನು ಮುಗಿಸಲು ಸಂಚು ರೂಪಿಸಿದ್ದಾರೆಯೇ ? ಗೊತ್ತಿಲ್ಲ.
ಆ ನಂತರ DND ಸೇವೆ ಬಂತು. ಈಗ ಆ ತೊಂದರೆ ಇಲ್ಲ. ಪೋಸ್ಟ್‌ಪೇಡ್ ಸಿಮ್‌ನಿಂದ ಅಷ್ಟೇನೂ ತೊಂದರೆ ಆಗಿಲ್ಲ. ಆದರೆ ಬಿಲ್ ಕಟ್ಟುವುದು ಒಂದು ದಿನ ತಡವಾದರೂ ದಿನಕ್ಕೆ ನಾಲ್ಕಾರು ಜನ ಕರೆ ಮಾಡಿ ಏನೋ ಲಕ್ಷ ರೂಪಾಯಿ ಸಾಲ ಕೊಟ್ಟವರಂತೆ "ಯಾವಾಗ ಕಟ್ಟುತ್ತೀರಿ?" ಎಂದು ಕೇಳುತ್ತಿದ್ದರು. ಮೊನ್ನೆ ಒಂದು ದಿನ "ನಾನು ಕಟ್ಟಲ್ಲ, ಡಿಸ್‌ಕನೆಕ್ಟ್ ಮಾಡಿ," ಎಂದು ಹೇಳಿದೆ. ಅದಾದ ನಂತರ ಕರೆ ಬಂದಿಲ್ಲ, ನಾನು ಬಿಲ್ ಕಟ್ಟಿಲ್ಲ, ಅವರು ಡಿಸ್‌ಕನೆಕ್ಟ್ ಸಹ ಮಾಡಿಲ್ಲ!
ಅದೆಲ್ಲಾ ಒಂದೆಡೆಗಿರಲಿ, ಅಸಲಿ ವಿಷಯ ಇರುವುದು ಏರ್‌ಟೆಲ್‌ನವರ ಡಿಶ್ ಟಿವಿ ಒಳಗೆ.
ರೂ 1,590/- ನೀಡಿ ಇವರ ಕೊಡೆ (ಆಂಟೆನಾ) ಹಾಕಿಸಿಕೊಳ್ಳುವಾಗ ಇವರು ಹೇಳಿದ್ದು ಕನ್ನಡದ ಎಲ್ಲಾ ವಾಹಿನಿಗಳೂ ಬರುತ್ತವೆ ಎಂದು. ನಾನು ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಹಾಕಿಸಿದ್ದು. ಹಾಗಾಗಿ ಆಗ ಸಮಯವಿದ್ದಾಗೆಲ್ಲಾ ಬರೀ ಕ್ರಿಕೆಟ್ ನೋಡೋದೇ ಆಯ್ತು. ಕ್ರಿಕೆಟ್ ಹಂಗಾಮ ಮುಗಿದ ನಂತರವೇ ನನಗೆ ತಿಳಿದಿದ್ದು, ಏರ್‌ಟೆಲ್‌ನವರ ಕೊಡೆ ಕೊಡೆಯಲ್ಲ, ಅದೊಂತರ ಟೋಪಿ ಎಂದು.
ಇವರ ಡಿಶ್‌ನಲ್ಲಿ ಕನ್ನಡದ ಅನೇಕ ವಾಹಿನಿಗಳು ಸಿಗುವುದೇ ಇಲ್ಲ. (ಉದಾ : ರಾಜ್ ಮ್ಯುಸಿಕ್, ಸಮಯ, ಚಿಂಟೂ ಇತ್ಯಾದಿ). ಸುವರ್ಣಾ, ಜನಶ್ರೀ ವಾಹಿನಿಯನ್ನು ಕೇಳಿದ ನಂತರ ಹಾಕಿ ಕೊಟ್ಟರು. ಉದಯ ಕಾಮೆಡಿ ಬೇಕಾದರೆ ಮತ್ತೊಂದಿಷ್ಟು ಹಣ ನೀಡಬೇಕಂತೆ. ಹಣ ನೀಡಿದರೂ ರಾಜ್ ಮ್ಯುಸಿಕ್, ಚಿಂಟೂ ಹಾಗೂ ಇತ್ತೀಚಿನ ಪಬ್ಲಿಕ್ ಟಿವಿಗಳು ಸಿಗುವುದಿಲ್ಲವಂತೆ ! ಆದರೆ ಹಣ ನೀಡಿದ ತಪ್ಪಿಗೆ ಅನೇಕ ಇತರೆ ಭಾಷೆಗಳ ವಾಹಿನಿಗಳನ್ನು ಬಳುವಳಿಯಾಗಿ ನೀಡಿದ್ದಾರೆ. ನಮ್ಮ ದುಡ್ಡು ಸದುಪಯೋಗ ಆಗಬೇಕೆಂದರೆ ಅವುಗಳನ್ನು ನೋಡಿ ಕರ್ಮ ಕಳೆದುಕೊಳ್ಳಬೇಕು ಅನ್ನುವುದು ಏರ್‌ಟೆಲ್ ಗ್ರಾಹಕ ಸೇವಾ ಶತ್ರುಗಳ ಅಂಬೋಣ.
ಮತ್ತೊಂದು ಗಮನಾರ್ಹ ಅಂಶವೆಂದರೆ ಇವರು ಅನೇಕ ಪ್ಯಾಕೇಜ್‌ಗಳನ್ನು ಮಾಡಿದ್ದಾರೆ. ಆದರೆ ಅವುಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಪ್ಯಾಕೇಜ್ ಇಲ್ಲ. ಕನ್ನಡವೊಂದೇ ಅಲ್ಲದೇ ದಕ್ಷಿಣ ಭಾರತದ ಯಾವ ಭಾಷೆಗೂ ಪ್ರತ್ಯೇಕ ಪ್ಯಾಕೇಜ್ ಇಲ್ಲ. "ಸೌತ್ ಇಂಡಿಯಾ ಪ್ಯಾಕೇಜ್" ಅಂತ ಒಂದಿದೆ. ಅದನ್ನೇ ಹಾಕಿಸಿಕೊಳ್ಳಬೇಕು. ಅದರಲ್ಲೂ ದಕ್ಷಿಣ ಭಾರತದ ಎಲ್ಲಾ ವಾಹಿನಿಗಳೂ ಬರುವುದಿಲ್ಲ ಅನ್ನೋದು ಅವರ ಕೊಡೆಯಷ್ಟೇ ದಿಟ.
ಕನ್ನಡಿಗರಿಂದ ಸುಲಿಗೆ ಮಾಡಿ ಕನ್ನಡದ ಎಲ್ಲಾ ವಾಹಿನಿಗಳನ್ನೂ ತೋರಿಸದೇ ನಮ್ಮ ದುಡ್ಡಿನಿಂದ ಬೇರೆ ಭಾಷೆಯ ವಾಹಿನಿಗಳನ್ನು ನಮ್ಮ ಮೇಲೆ ಹೇರಿಕೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ "ಪ್ಯಾಕೇಜ್ ಇರೋದೇ ಹೀಗೆ!" ಎಂಬ ಉತ್ತರ ಬರುತ್ತದೆ. ಅಂದರೆ ಅವರು ಇರೋದೇ ಹೀಗೆ! ಹಾಗಾದ್ರೆ ಕನ್ನಡಿಗರು ಸುಮ್ಮನಿರೋದಾದ್ರೂ ಹೇಗೆ ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ