- ಪಂಜೆ ಮಂಗೇಶ ರಾವ್
ನಾಗರ ಹಾವೆ! ಹಾವೊಳು ಹೂವೆ!ಬಾಗಿಲ ಬಿಲದಲಿ ನಿನ್ನಯ ಠಾವೆ?
ಕೈಗಳ ಮುಗಿವೆ, ಹಾಲನ್ನೀವೆ
ಬಾ ಬಾ ಬಾ ಬಾ ಬಾ ಬಾ ಬಾ ಬಾ
ಹಳದಿಯ ಹೆಡೆಯನು ಬಿಚ್ಚೋ ಬೇಗಾ!
ಹೊಳಹಿನ ಹೊಂದಲೆ ತೂಗೋ, ನಾಗಾ!
ಕೊಳಲನ್ನೂದುವೆ ಲಾಲಿಸು ರಾಗಾ!
ನೀ ನೀ ನೀ ನೀ ನೀ ನೀ ನೀ ನೀ
ಎಲೆ ನಾಗಣ್ಣ, ಹೇಳೆಲೊ ನಿನ್ನಾ
ತಲೆಯಲಿ ರನ್ನವಿಹ ನಿಜವನ್ನಾ!
ಬಲುಬಡವಗೆ ಕೊಪ್ಪರಿಗೆಯ ಚಿನ್ನಾ
ತಾ ತಾ ತಾ ತಾ ತಾ ತಾ ತಾ ತಾ
ಬರಿಮೈ ತಣ್ಣಗೆ, ಮನದಲಿ ಬಿಸಿಹಗೆ,
ಎರಡೆಳೆ ನಾಲಗೆ ಇದ್ದರು ಸುಮ್ಮಗೆ.
ಎರಗುವೆ ನಿನಗೆ, ಈಗಲೆ ಹೊರಗೆ
ಪೋ ಪೋ ಪೋ ಪೋ ಪೋ ಪೋ ಪೋ ಪೋ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ