
ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರು ಪರಮಪದ ಹೊಂದಿದ ನಂತರ, ಅವರ ಸಂದೇಶವನ್ನು ದೇಶದ ಪ್ರಜೆಗಳ ಬಳಿಗೆ ಮುಟ್ಟಿಸುವುದಕ್ಕಾಗಿ ಯುವಕರಾದ ಸ್ವಾಮಿ ವಿವೇಕಾನಂದರು ದೇಶದ ನಾಲ್ಕೂ ದಿಕ್ಕುಗಳನ್ನು ಸುತ್ತಿ ಬಂದರು. ಆ ಕಾಲ ಘಟ್ಟದಲ್ಲಿ ಒಂದು ದಿನ ಅವರು ವಾರಣಾಸಿಯ ಸಮೀಪದಲ್ಲಿ ನಿರ್ಜನವಾಗಿದ್ದ ಒಂದು ರಸ್ತೆಯಲ್ಲಿ ಒಂಟಿಯಾಗಿ ನಡೆದು ಹೋಗುತ್ತಿದ್ದರು. ಆಗ ಭಯಂಕರವಾದ ಕಪಿಗಳ ಗುಂಪೊಂದು ಅವರ ಬೆನ್ನು ಹತ್ತಿತು. ಅವರು ಅವುಗಳಿಂದ ದೂರವಾಗಿ ಓಡಲಾರಂಭಿಸಿದರು. ಆದರೆ ಕೋತಿಗಳಷ್ಟು ವೇಗವಾಗಿ ಅವರಿಂದ ಹೇಗೆ ಓಡಲು ಸಾಧ್ಯ! ಅವರಿಗೂ, ಕೋತಿಗಳ ಗುಂಪಿಗೂ ಇದ್ದ ಅಂತರವು ಕಡಿಮೆಯಾಗುತ್ತಾ ಬಂದುದರಿಂದ ಅವರಲ್ಲಿ ಭಯ ಹುಟ್ಟಿತು. ಆಗ ಇದ್ದಕ್ಕಿದ್ದಂತೆ, ‘‘ಓಡಬೇಡ ಕೋತಿಗಳನ್ನು ಎದುರಿಸು’’ ಎಂಬ ವಾಣಿಯು ಕೇಳಿಬಂದಿತು. ವಿವೇಕಾನಂದರು ಓಡುವುದನ್ನು ನಿಲ್ಲಿಸಿ, ಅಲ್ಲಿಯೇ ನಿಂತು, ಕೋತಿಗಳ ಕಡೆಗೇ ಕೋಪದಿಂದ ತಿರುಗಿ ನೋಡಿದರು. ಬೆದರಿ ಹೋದ ಕೋತಿಗಳು ತಟಕ್ಕನೆ ನಿಂತು ಬಿಟ್ಟವು. ಅವರು ನೋಡುತ್ತಿದ್ದಂತೆಯೇ ಅವು ಮೆಲ್ಲಮೆಲ್ಲಗೇ ಹಿಂಜರಿದು, ಎತ್ತಲೋ ಹೊರಟು ಹೋದುವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ