ಜೂನ್ 14, 2011

ಕೇವಲ ನಿನ್ನವನು r ಲವ್ ಚೀಟಿ

ನಿನ್ನ ಕೋಪ ಹೇಗಿದೆ? ನಿನ್ ಸಿಡುಕುತನ? ನಿನ್ನ ಮೊಂಡತನ? ನಿನ್ನ ಸೋಮಾರಿತನ? ನಿನ್ನು ಮುದ್ದುತನ? ಮೊದ್ದುತನ? ಪೆದ್ದುತನ? ಮೊದಲಿನ ಹಾಗೆ ನಿನ್ನ ಕೋಪದ ಜ್ವಾಲಾಮುಖಿ ನಿಮ್ಮ ಮನೆಯವರ ಮೇಲೆ ಸಿಡಿಯುತ್ತಲೇ ಇದೆಯಾ? ದಿನಕ್ಕೆಷ್ಟು ಭಾರಿ ನನಗೆ ಶಾಪ ಹಾಕುತ್ತೀಯಾ? ನಾನು ಇಷ್ಟಪಟ್ಟು ನಿನಗೆ ಕೊಟ್ಟ ನವಿಲುಗರಿ, ನನ್ನದೇ ಹೆಸರಿಟ್ಟುಕೊಂಡು ತಬ್ಬಿಕೊಂಡಿರುತ್ತಿದ್ದ ಪಾಪದ ಟೆಡ್ಡಿಬೇರು, ನಾನು ನಿನಗೆ ನವಿಲೂರು ಜಾತ್ರೆಯಲ್ಲಿ ಕೊಡಿಸಿದ ಕಲರ್ ಕಲರ್ ಕನ್ನಡಕ, ಗಾಂಧಿಬಜಾರಲ್ಲಿ ಕೊಡಿಸಿದ ಪ್ರೇಮ ಪುಸ್ತಕ, ನಿನಗೇ ಅಂತ ಬರೆದ ನೂರಾರು, ಕ್ಷಮಿಸು ಸಾವಿರಾರು ಕವಿತೆಗಳು,ಎಲ್ಲವನ್ನೂ ನನ್ನ ಮೇಲಿನ ಕೋಪ ತೀರಿಸಿಕೊಳ್ಳಲು ಅಗ್ನಿ ದೇವನಿಗೆ ಸಮರ್ಪಿಸಿಯಾಗಿರಬೇಕು ಅಲ್ವಾ? ಬಿಡು ನಿನ್ನ ಕೋಪದ ಮಹಿಮೆ ಅಪಾರ ಎಂಬುದನ್ನ ನಿನ್ನ ಜೊತೆ ಕಳೆದ ಎರಡು ವರ್ಷ ಮೂರು ತಿಂಗಳು ಹದಿನಾಲ್ಕು ದಿನಗಳಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಅಂದ ಹಾಗೇ ನೀನು ಹೇಗಿದ್ದೀಯಾ? ನನ್ನನ್ನ ನಿನ್ನ ಬಲೆಯಲ್ಲಿ ಕೆಡವಿದ ನಿನ್ನ ಮನಮೋಹಕ ಕಂಗಳು ಹೇಗಿವೆ? ನನ್ನನ್ನ ಬಿಡದೇ ಕಾಡುತ್ತಿದ್ದ ನಿನ್ನ ನಗು ಹಾಗೆ ಇದೆ ತಾನೆ? ಅಂದ ಹಾಗೆ ಈ ಜನ್ಮದಲ್ಲಿ ನೀನು ನನಗೆ ಫೋನ್ ಮಾಡೋದು ಕನಸಿನ ಮಾತು ಅಲ್ವ? ಮೆಸ್ಸೇಜ್ ಮಾಡೊಲ್ಲ, ನನ್ನ ಬಗ್ಗೆ ಚಿಂತೆ ಮಾಡೊಲ್ಲ, ನಾನು ನಿನಗೆ ನೆನಪಾಗೊಲ್ಲ, ಅದೆಲ್ಲ ಗೊತ್ತಿದ್ರೂ ಈ ಪತ್ರ ಬರಿತ್ತಿದ್ದೀನಿ. ಆದ್ರೂ ಎಲ್ಲೋ ಒಂದು ಸಣ್ಣ ಆಸೆ, “ಸ್ಸಾರಿ ಕಣೋ ಕರಿಯಾ, ನಂದೇ ತಪ್ಪು, ಮನ್ಸಲ್ಲಿ ಏನು ಇಟ್ಕೋಬೇಡ, ನಾನ್ ಕೋಪ ಮಾಡ್ಕೊಳ್ದೆ ಇನ್ಯಾರು ಕೋಪ ಮಾಡ್ಕೊಬೇಕೊ? ನಡಿ ಪಾನಿಪೂರಿ ಕೊಡ್ಸು, ಪುನೀತ್ ಫಿೀಲ್ಮ್‌ಗೆ ಕರ್ಕೊಂಡ್ ಹೋಗು, ಹಾಗೆ ಕೆ.ಎಪ್.ಸಿ ಕಡೆ ಒಂದು ರೌಂಡ್ ಹೊಡ್ಕೊಂಡು ಬರೋಣ, ನಿಮ್ ಮನೆಗೆ ಕರ್ಕೊಂಡ್ ಹೋಗು ಪ್ಲೀಸ್” ಅಂತ ಒಂದು ಫೋನ್ ಮಾಡ್ತಿಯೇನೋ ಅಂತ ಇವತ್ತಿಗೂ ಈ ಕ್ಷಣಕ್ಕೂ ಕಾಯ್ತನೆ ಇದ್ದೀನಿ.
ನಿಮ್ಮ ಮನೆಗೆ ಬಂದು ನಿಮ್ಮ ಮನೆಯವರ ಮುಂದೆಯೆ ಕೆನ್ನೆಗೆ ನಾಲ್ಕು ಬಿಟ್ಟು ನಿನ್ನ ಹೆಗಲಮೇಲೆ ಕೂರಿಸಿಕೊಂಡು ಬಂದ್ಬಿಡ್ಬೇಕು ಅಂತ ತುಂಬಾ ಸಲ ಅನ್ನಿಸಿದೆ. ಆದರೆ ಅದೇ ಗುಳಿಗೆನ್ನೆಯ ದರ್ಶನಕ್ಕೆ ಹಗಲು ರಾತ್ರಿ ಅನ್ನದೆ ಕಾದಿದ್ದು ನೆನಪಾಗುತ್ತೆ, ಕೊಟ್ಟ ಮುತ್ತುಗಳು ನೆನಪಾಗುತ್ತೆ, ಮನೆಯವರೆಲ್ಲರೂ ನಮ್ಮ ಮದುವೆಗೆ ನೋ ಅಂದ್ರೂ ಕೂಡ ಎಲ್ಲರ ಮಾತನ್ನ ಧಿಕ್ಕರಿಸಿ ನನ್ನ ಮನೆಯಂಗಳಕ್ಕೆ ಬಂದ ನಿನ್ನ ಅಪಾರ ಪ್ರೀತಿ ನೆನಪಾಗುತ್ತೆ, ಎಲ್ಲಕ್ಕಿಂತಲೂ ನಮ್ಮ ಪ್ರೀತಿಗೆ ಸಾಕ್ಷಿಯಾಗಿ ನಮ್ಮದೇ ಪುಟ್ಟ ಕಂದ ಇನ್ನೇನು ನಿನ್ನ ಮಡಿಲಿಗೆ ಬಂದುಬಿಡುತ್ತೇ ಅನ್ನುವುದು ನೆನಪಾಗಿ ನಿನ್ನ ಮೇಲಿನ ಕೋಪ,ಸಿಟ್ಟು ಅಸಹನೆ ಎಲ್ಲವೂ ಮಾಯವಾಗಿ ನಾನೆ ನಿನ್ನ ಮಗುವಂತಾಗಿಬಿಡುತ್ತೇನೆ. ನೋಡು ನಿನ್ನ ಮೇಲಿದ್ದ ಪ್ರೀತಿ ಕಾಳಜಿ ಈಗ ನೂರು ಪಟ್ಟು ಜಾಸ್ತಿಯಾಗಿದೆ, ನಿನ್ನ ಮೊಂಡುತನ,ನಿನ್ನ ಸಿಟ್ಟು ಎಲ್ಲವನ್ನ ನಾನು ನನ್ನ ಪ್ರೀತಿಯಿಂದಾನೆ ಗೆಲ್ತೀನಿ ಅನ್ನೋ ಭರವಸೆ ಇದೆ, ಆದ್ರೆ ನಿನ್ನಲ್ಲಿ ಒಂದು ಒಂದೇ ಒಂದು ಪುಟಾಣಿ ಬೇಡಿಕೆ ಇದೆ, ಅದೇನಪ್ಪ ಅಂದ್ರೆ, ಪ್ಲೀಸ್ ಸ್ವಲ್ಪ ಕೋಪ ಕಡಿಮೆ ಮಾಡ್ಕೋ ಮರಾಯ್ತಿ, ಸಹನೆ ಬೆಳೆಸ್ಕೊ, ನನ್ನ ಮೇಲೆ ಸ್ವಲ್ಪ ಪ್ರೀತಿ ಇರಲಿ ಅನ್ನೋ ಮಾತು ನಿನಗೆ ಹೇಳೋದಿಲ್ಲ, ನೀನು ಪ್ರೀತಿಯ ವಿಷಯದಲ್ಲಿ ಯಾವತ್ತಿಗೂ ನನ್ನ ಪಾಲಿನ ಅಕ್ಷಯಪತ್ರೆ.
ಪ್ಲೀಸ್ ಬಂದುಬಿಡು, ಬದುಕಲ್ಲಿ ಕೋಪ ತಾಪಗಳಿಗೆ ಹೆಚ್ಚಿನ ಆಯುಷ್ಯ ಇರಲ್ಲ ಚಿನ್ನ. ಜಗತ್ತನ್ನೆ ಎದುರು ಹಾಕಿಕೊಂಡು ಬದುಕು ಕಟ್ಟಿಕೊಂಡವರು ನಾವು. ಸಣ್ಣ ಸಣ್ಣ ವಿಷಯಗಳಿಗೆ ಮನಸ್ಸು ಮುರಿದುಕೊಳ್ಳುವುದು ಬೇಡ, ಇವರದ್ದು ಬರಿ ಮೂರು ದಿನದ ಪ್ರೀತಿ ಅಂತ ಯಾರಾದ್ರೂ ಆಡ್ಕೊಂಡು ನಗೋದು ನಮ್ಗೆ ಬೇಕಾ ಹೇಳು? ಎಲ್ಲರ ಕಣ್ಣು ಕುಕ್ಕುವ ಹಾಗೆ ಬದುಕಿ ತೋರಿಸಬೇಕಲ್ವಾ ನಾವು? ಅವರ ಮಾತು ಹಾಳಾಗಲಿ ಬಿಡು. ಇನ್ನೇನು ಕೆಲವೇ ತಿಂಗಳು ನಮ್ಮ ಮಡಿಲಿಗೆ ಕುಮಾರ ಕಂಠೀರವನೋ, ಮುದ್ದು ಗೌರಿಯೋ ಬರುವ ಸಮಯ, ಸ್ವಲ್ಪಾನೆ ಯೋಚಿಸಿ ನೋಡು, ಜಗತ್ತಲ್ಲಿ ಯಾರು ಪ್ರೀತಿಸದ ಹಾಗೆ ನಿನ್ನನ್ನ ಪ್ರೀತಿಸಿದವನು ನಾನು.ನನಗಿಂತ ಸಾವಿರ ಸಾವಿರ ಪಟ್ಟು ನನ್ನನ್ನ ಪ್ರೀತಿಸಿದ ಮೊಂಡಿ ನೀನು. ಬೇಕಾದರೆ ನನ್ನದಲ್ಲದ ತಪ್ಪುಗಳಿಗೆ ನಾನೇ ಕ್ಷಮೆ ಕೇಳುತ್ತೇನೆ. ನಿನಗೆ ಮಾಡಿದ ಪ್ರಾಮಿಸ್‌ನಂತೆ ಜಯಂತ ಕಾಯ್ಕಿಣಿ ಸರ್ ಕೈಕಾಲು ಹಿಡಿದು ಖಂಡಿತ ಅವರನ್ನ ಮೀಟ್ ಮಾಡಿಸ್ತೀನಿ, ಪ್ಲೀಸ್ ಬಂದುಬಿಡು. ಅಷ್ಟೇ ಅಲ್ಲ, ಡಿಸೆಂಬರ್ ಚಳಿಯ ಹಾವಳಿ ವಿಪರೀತವಾಗುತ್ತಿದೆ. ಈ ಚಳಿಗೆ ನಿನ್ನದೆ ಹೊದಿಕೆ ಬೇಕು ಅನ್ನಿಸ್ತಿದೆ. ನನ್ನ ಕಷ್ಟ ನಿನಗೆ ಅರ್ಥವಾಗಿರಬೇಕು ಅಲ್ವಾ ಮುದ್ದು ಹೆಂಡತಿ.. J
ಕೇವಲ ನಿನ್ನವನು




ನೀನು ನನಗೆ ನೆನಪಾದ ಒಂದು ಸುಂದರ ಸಂಜೆ. ನಾನು ನಿನ್ನ ನೆನಪುಗಳ ಮೊಗ್ಗು ಹೊದ್ದುಕೊಂಡು ನಿನ್ನನ್ನೇ ಧ್ಯಾನಿಸುತ್ತಿದ್ದಾಗ ನನ್ನೊಳಗೆ ಸದ್ಧಿಲ್ಲದೆ ಮೂಡಿದ ಆಸೆ ನಿನ್ನ ಜೊತೆ ಒಂದು ದಿನ ಪೂರ್ತಿಯಾಗಿ ಕಳೆಯಬೇಕು. ಜನ ನಗ್ತಾರೆ ಗೊತ್ತು, ಏನ್ ಹುಡುಗೀನಪ್ಪ ಅನ್ಕೋತಾರೆ ಅಂತಾನೂ ಗೊತ್ತು, ತುಂಬಾ ಫಾಸ್ಟ್ ಇದ್ದಾಳಪ್ಪ ಹುಡುಗಿ ಅಂತಾನೂ ಹೇಳ್ತಾರೆ, ಜನರ ಮಾತು ಬಿಡು, ನನ್ನ ಸಭ್ಯ ಪೋಲಿ ಹುಡುಗ ನೀನು, ಯೋಗರಾಜಭಟ್ಟರ ಹೊಸ ಸಿನಿಮಾದ ಹಾಡಿನ ಸಾಲಿನ ಒಳ್ಳೆ ಲೋಪರ್ ಆದ ನೀನ್ ಕೂಡ ನನ್ನ ಮಾತನ್ನ ಹೇಗೆ ಅರ್ಥಮಾಡ್ಕೋತೀಯೋ ಕಾಣೆ, ನನಗನ್ನಿಸೋ ಪ್ರಕಾರ ಯಾವುದಾರು ಜನರೇ ಬಾರದ ಹಳೆಯ ಸಿನಿಮಾ ಟೆಂಟ್ಗೆ ಕರೆದುಕೊಂಡು ಹೋದ್ರೆ ಹೇಗೆ? ಯಾವುದಾದ್ರು ಪಾರ್ಕ್? ಹೋಗ್ಲಿ ಧೈರ್ಯ ಮಾಡಿ ಒಂದು ಲಾಡ್ಜು? ಯಾವುದಾದ್ರು ಪೋಲಿ ಗೆಳೆಯರ ರೂಮು? ಸರಿ ಅದು ನಿನ್ ಕರ್ಮ, ಹೇಗಂದುಕೊಂಡರೂ ಚಿಂತೆಯಿಲ್ಲ, ಅಪ್ಪಅಮ್ಮನ ಕಣ್ಣು ತಪ್ಪಿಸಿ, ತಂಗಿಗೆ ಪೂಸಿ ಹೊಡೆದು, ತಮ್ಮನಿಗೆ ನೂರು ಸುಳ್ಳು ಹೇಳಿ, ಅಣ್ಣನ ಬೈಕೆ ಪೆಟ್ರೋಲ್ ತುಂಬಿಸಿ ಹೊರಗೆ ಕಳಿಸಿ ನಿನ್ನ ಜೊತೆ ಒಂದು ದಿನ ಇರ್ಬೇಕು ಅನ್ನಿಸ್ತಿದೆ.
ನನಗೆ ಗೊತ್ತು ಇಂಥಾ ಸಮಯಕ್ಕೆ ಕಾದು ಕುಳಿತ ಸಭ್ಯ ಪೋಲಿ ಹುಡುಗ ನನ್ ಒಳ್ಳೆ ಲೋಪರ್ ನೀನು ಅಂತ. ನನ್ನ ಪತ್ರ ಒಡಿ ನೀನು ನೀನಾಗಿರಲ್ಲ, ಎಲ್ಲಾ ಮಾಸ್ಟರ್ಪ್ಲಾನುಗಳು ನಿನ್ ತಲೆಯಲ್ಲಿ ಹಗ್ಗಜಗ್ಗಾಟ ಆಡ್ತ ಇರುತ್ತೆ, ಪಾರ್ಕೋ, ಸಿನಿಮಾನೋ, ಗೆಳೆಯರ ರೂಮೋ, ಸ್ವಲ್ಪ ಸಮಾಧಾನ ದೊರೆ, ಸ್ವಲ್ಪ ನಿಧಾನಿಸು ಪ್ರಭುವೆ, ನಿನ್ನೆಲ್ಲ ಪೋಲಿಗುಣಗಳ ಹೊರತಾಗಿಯೂ ನಾನು ನಿನ್ನನ್ನ ಅದೆಷ್ಟು ಪ್ರೀತಿಸ್ತೀನಿ ಅಂತ ಹೇಳ್ಕೊಳ್ಬೇಕಾಗಿದೆ, ಇದೆಲ್ಲ ಪ್ರೀತಿ ಹೇಳಿಕೊಳ್ಳೋ ಜಾಗಗಳಲ್ಲ ಕರಿಯಾ, ಪ್ರಾಣಬಿಟ್ರೂ ನಾನಲ್ಲಿಗೆಲ್ಲ ಬರೊದಿಲ್ಲ, ನಿರಾಸೆಯಾಯಿತೇನೋ ಪಾಪ? ಸ್ವಲ್ಪ ಸಮಾಧಾನವಿರಲಿ, ವ್ಯವಧಾನವಿರಲಿ ಗೆಳೆಯ. ನಮ್ಮ ಮುಂದಿನ ಬದುಕಿನ ಬಗ್ಗೆ ನಿನ್ ಜೊತೆ ಮಾತಾಡ್ಬೇಕಾಗಿದೆ. ಫೋನಲ್ಲಿ ಬರಿ ಕಾಗೆ ಹಾರಿಸ್ತೀಯ, ಮಾಡೋಣ ಬಿಡೂ, ಆಗುತ್ತೆ ಬಿಡೂ, ಎಲ್ಲ ಸರಿ ಹೋಗುತ್ತೆ ಬಿಡು, ಇಂಥ ಮಾತುಗಳನ್ನ ನಾಲ್ಕುವರ್ಷಗಳಿಂದ ಕೇಳಿ ಕೇಳಿ ಹುಚ್ಚು ಹಿಡಿದಿದೆ, ಮನೆಯಲ್ಲಿ ಮದುವೆಗೆ ಹುಡುಗನ ಭೇಟೆ ಶುರುವಾಗಿದೆ. ಪ್ಲೀಸ್ ಏನಾದ್ರು ಮಾಡು ನನಗೆ ಗೊತ್ತಿಲ್ಲ, ಒಂದೊಳ್ಲೆ ಕೆಲ್ಸ, ಪರವಾಗಿಲ್ಲ ಅನ್ನುವಷ್ಟು ಸಂಬಳ, ನನ್ನನ್ನ ಸಾಕಬಲ್ಲೆ ಅನ್ನುವಷ್ಟು ನಂಬಿಕೆ, ಇಷ್ಟೇ ನಾನು ನಿನ್ನನ್ನ ಕೇಳ್ತಿರೋದು.
ಇದನ್ನೆಲ್ಲ ನಿನ್ ಜೊತೆ ಮಾತಾಡ್ಬೇಕು, ಪ್ಲಿಸ್ ಯಾರೂ ಇಲ್ಲದ ಜಾಗಕ್ಕೆ ನನ್ನ ಕರೆದುಕೊಂಡು ಹೋಗು, ದರಿದ್ರ ಮೊಬೈಲು ತರಬೇಡ, ನಿನಗೆ ಊರ ತುಂಬ ಗೆಳತಿಯರು, ಮೆಸ್ಸೇಜ್ ಕುಟ್ಟುತ್ತ ಕುಳಿತುಬಿಡ್ತೀಯಾ. ನಿನ್ನ ಸೋಮಾರಿತನವನ್ನ ನಾನು ಪ್ರಶ್ನಿಸಬೇಕು, ನಾನೆಷ್ಟು ಪ್ರೀತಿಸ್ತೀನಿ ಅಂತ ನಿನ್ನಲ್ಲಿ ಹೇಳ್ಕೊಳ್ಳ್ಬೇಕು, ನಿನ್ನ ಬೆನ್ನಿಗಂಟಿಕೊಂಡು ನೂರಾರು ಮೈಲಿ ಕುಳಿತುಕೊಳ್ಳಬೇಕು, ಬೈಕು ಬೋರಾದರೆ ಕಾಲು ನಡಿಗೆ, ನಿನ್ನೊಂದಿಗೆ ಹೆಜ್ಜೆ ಹಾಜಿ ನಡೆಯುವ ನಡೆಯುವ ಸೌಭಾಗ್ಯಕ್ಕಿಂತ ಬೇರೆ ಏನಿದೆ ನನಗೆ? ಬೇಕಾದರೆ ಒಂದೂ ಮಾತಿಲ್ಲದೆ ಸಂಜೆಯವರೆಗೂ ನಿನ್ನ ಕೈ ಹಿಡಿದುಕೊಂಡು ನಡೆಯಬಲ್ಲೆ. ಅಲ್ಲಿ ನಿನ್ನ ಕಳ್ಳ ನೋಟ, ನನ್ನ ಹುಸಿಮುನಿಸು ಎಲ್ಲ ಅದೆಷ್ಟು ಸೂಪರ್ ಅಲ್ವಾ? ತುಂಬಾ ಭಾವುಕ ಹುಡುಗಿ ನಾನು ಅದ್ಕೆ ಈ ರೀತಿ ಮಾತಾಡ್ತಿದ್ದೀನಿ, ಸರಿ ನಿಂಗೆ ಇದೆಲ್ಲ ಇಷ್ಟ ಆಗಲ್ಲ ಅಂದ್ರೆ ಹೇಳು, ನೀನು ಕರೆದಲ್ಲಿಗೆ ಬರ್ತೀನಿ, ನನ್ನ ಪ್ರೀತಿಗೆ ನನ್ನ ಗೆಳೆಯನಿಂದ ಯಾವ ಅಪಚಾರವೂ ಆಗೊಲ್ಲ ಅನ್ನುವ ನಂಬಿಕೆ ನನಗಿದೆ. ಆದ್ರೆ… ಆದ್ರೆ… ಆದ್ರೆ.. ನೀನು ನನ್ನಂತ ದಂತದ ಬೊಂಬೆಯನ್ನ ನೋಡಿಯೂ ಮುಟ್ಟಲಾಗದೆ, ಮುದ್ದಿಸಲಾಗದೆ ಇರೋದನ್ನ ನಾನು ನೋಡ್ಬೇಕು ಅನ್ನಿಸ್ತಿದೆ. ಅಯ್ಯೋ ಪಾಪ ಅನ್ನಿಸಿದ್ರೆ ಒಂದೇ ಒಂದು ಪುಟಾಣಿ ಮುತ್ತು. ಅದು ಕೆನ್ನೆಗೆ ಮಾತ್ರ.
ನವಿಲೂರು ಹುಡುಗಿ
143





( ವಿಶೇಷ ಸೂಚನೆ. ಈ ಸಾಲುಗಳನ್ನ ಸುಮ್ಮನೇ ಗೀಚಿದ್ದು, ಕವಿತೆ ಅಂದುಕೊಂಡು ಓದಿದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು)
ನೀನು ನನಗೆ ಮುಡಿಯಲಾರದ ಹೂವು
ಮರೆಯಲಾರದ ನೋವು
ಎದುರು ನೋಡುತ್ತಿರುವ ಸಾವು
ನೀನು ಗಾಳಿಗೆ ತೂರಿದ ನೀತಿ
ಪ್ರಾಮಾಣಿಕವಲ್ಲದ ಪ್ರೀತಿ.
ನೀನು ನನಗೆ ನೋವಿನ ಅಕ್ಷಯಪಾತ್ರೆ
ಹೃದಯದ ಸಣ್ಣ ನೋವಿಗೂ ಸ್ಪಂದಿಸದ
ನಿರಾಸೆಯ ಮಾತ್ರೆ.
ಯಾರೂ ನೋಡಲಾಗದ ಹಾಳೂರಿನ ಜಾತ್ರೆ
ಎಂದೂ ಮುಗಿಯದ ಅಂತಿಮ ಯಾತ್ರೆ.
ನೀನು ನನಗೆ ಮರೆತುಬಿಡುವಂತಹ ಚಿತ್ರ
ನಾನು ಒಂದಕ್ಷರವೂ ಓದಲಾಗದ ಪತ್ರ
ಸರಿಯಾದ ಪ್ರಶ್ನೆಗೆ ತಪ್ಪು ತಪ್ಪು ಉತ್ತರ
ಕೈಗೂಡದ ಕನಸುಗಳಿತೆ ತುಂಬ ಹತ್ತಿರ.
ನೀನು ನನಗೆ ಬೆಳಕಿನ ಕತ್ತಲು
ಭಾವನೆಗಳ ಪೂರ್ತಿ ಬೆತ್ತಲು
ನೀನು ನನಗೆ ಅಮವಾಸ್ಯೆಯ ಚಂದಿರ
ದೇವರಿಲ್ಲದ ಮಂದಿರ,
ಭರವಸೆಗಳೆ ಇಲ್ಲದ ಖಾಲಿ ಖಾಲಿ ಬಟ್ಟಲು
ಬದುಕಿನ ರೇಸಿನಲ್ಲಿ ಸಿಕ್ಕ ಸೋಲಿನ ಮೆಡಲ್ಲು.
ನೀನು ಆಸೆಗಳ ಮುಳುಗಿಸಿದ ಕಡಲು
ಆಸರೆಯಾಗದೇ ಹೋದ ಒಡಲು
ನಿದ್ದೆ ಬಾರದ ಮಡಿಲು
ನೀನು ನನಗೆ ಒಂದು ಸುಂದರ ಸಜ
ಆದರೂ ನಾನು ಪ್ರೀತಿಸಿದ್ದು ಎಷ್ಟೊಂದು ನಿಜ.








ನಿನ್ನ ಜೊತೆಗಿದ್ದ ಸಮಯ,ಹಂಚಿಕೊಂಡ ಖುಷಿಯ, ಮರೆಯಲು ಸಾಧ್ಯವೇ ಗೆಳೆಯಾ? ಸದಾ ಕಾಲ ನೆನೆಯುವುದು ನನ್ನ ಈ ಪುಟ್ಟ ಹೃದಯ ಅನ್ನುವ ನೀನು ಕಳೆದ ವರ್ಷ ಕಳಿಸಿದ ಪುಟಾಣಿ ಎಸ್ಸೆಮ್ಮೆಸ್ಸು ಇನ್ನೂ ನನ್ನ ಮೊಬೈಲಿನ ಇನ್ಬಾಕ್ಸ್ನಲ್ಲಿ ಬೆಚ್ಚಗೆ ಕುಳಿತಿದೆ. ದಿನಕ್ಕದೆಷ್ಟು ಬಾರಿ ತೆರೆದು ಓದುತ್ತೇನೋ ನನಗೇ ತಿಳಿಯುತ್ತಿಲ್ಲ. ಜಗತ್ತಿನಲ್ಲಿ ಇನ್ಯಾರೂ ಪ್ರೀತಿಸದಷ್ಟು ನನ್ನ ನೀನು ಪ್ರೀತಿಸಿದ್ದೆ ಅನ್ನುವುದು ದೇವರಷ್ಟೇ ಸತ್ಯ. ಆದರೆ ನಿನ್ನ ಪ್ರೀತಿಗೆ ನಾನು ನಂಬಿಕೆ ದ್ರೋಹದ, ಸುಳ್ಳಿನ ಹೊದಿಕೆ ಹೊದ್ದಿಸಿಬಿಟ್ಟೇ ಅನ್ನೋದು ಕೂಡ ಅ ದೇವರಷ್ಟೆ ಸತ್ಯ ಚೇತು. ನಿನ್ನ ಮತ್ತೇನನ್ನೂ ಕೇಳುವ ಸ್ಥಿತಿಯಲ್ಲಿ ನಾನಿಲ್ಲ, ನನ್ನ ತಪ್ಪುಗಳನ್ನ ನನ್ನ ಸುಳ್ಳುಗಳನ್ನ, ನನ್ನ ನಂಬಿಕೆ ದ್ರೋಹವನ್ನ ಪ್ಲೀಸ್ ಒಂದು ಸಲ ಮನ್ನಿಸಿಬಿಡು. ಮನ್ನಿಸಿಬಿಡೂ ಅಂತ ಕೇಳಿಕೊಂಡಷ್ಟು ಸುಲುಭವಲ್ಲ ಅನ್ನೋದು ನೆನಪಿದೆ ಗೆಳತಿ, ಆದರೂ ನಾನೂ ನಿನ್ನನ್ನ ಅಷ್ಟೇ ಪ್ರೀತಿಸಿದ್ದೆ, ಆದರೆ ಮನಸ್ಸು ಚಂಚಲ, ಯಾವುದೋ ಯಾರದೋ ಮೋಹಕ್ಕೆ ಮರುಳಾಗಿ ನಿನ್ನಿಂದ ದೂರವಾದ ಆ ದಿನಗಳಲ್ಲಿ ತುಂಬಾ ಅನುಭವಿಸಿದ್ದೀನಿ ಗೆಳತಿ, ಹಾಗೆ ಪ್ರೀತಿಗೆ ಅಂದ ಚಂದಗಳ ರೂಪ ರಾಶಿಗಳ ಹಂಗಿಲ್ಲ ಅನ್ನುವುದು ನನಗೆ ಗೊತ್ತಾಗಿದೆ. ನಾನು ಪ್ರೀತಿಸಿದ್ದು ನಿನ್ನನ್ನ, ಮೋಹಿಸಿದ್ದು ಇನ್ಯಾರನ್ನೋ. ಪ್ಲೀಸ್ ಮೋಹಕ್ಕಿಂತ ಪ್ರೀತಿಗೆ ಹೆಚ್ಚು ತೂಕ ಅನ್ನೋದನ್ನ ನಿನ್ನಿಂದ ದೂರಾದ ಪ್ರತಿ ಕ್ಷಣದಿಂದಲೇ ನನಗೆ ತಿಳಿದಿದೆ.
ನಿನ್ನ ಜೊತೆ ನಾನು ಆಡಿರುವ ಮಾತುಗಳ ತೂಕ ಒಂದು ತೂಕವಾದರೆ ಆಡದೆ ಉಳಿಸಿಕೊಂಡ ಮಾತುಗಳ ತಕ್ಕಡಿಯ ತೂಕ ಹೆಚ್ಚು ತೂಗುತ್ತದೆ. ಅಳೋದಕ್ಕೆ,ನಗೋದಕ್ಕೆ,ಕೋಪಿಸಿಕೊಳ್ಳೋದಕ್ಕೆ,ಮುನಿಸಿಕೊಳ್ಳೋದಕ್ಕೆ,ಮುದ್ದುಮಾಡೋಕೆ, ಎದೆಗೊರಗಿಕೊಂಡು ಬಿಕ್ಕಳಿಸೋಕೆ ನನಗೆ ನೀನು ಬೇಕು ಚೇತು, ಇದುವರೆಗು ನಾನು ನಿನ್ನ ಜೊತೆಯೇ ಹೆಚ್ಚು ಜಗಳವಾಡಿದ್ದೀನಿ, ಹೆಚ್ಚು ಮುನಿಸಿಕೊಂಡಿದ್ದೀನಿ, ಹೆಚ್ಚು ಮುದ್ದುಮಾಡಿದ್ದೀನಿ, ಹೆಚ್ಚು ಕಣ್ಣೀರಾಗಿದ್ದೀನಿ, ಅದಕ್ಕಿಂತಲೂ ಹೆಚ್ಚು ನಿನ್ನನ್ನ ಪ್ರೀತಿಸಿದ್ದೀನಿ ಚೇತು, ನಿನ್ನ ಬೆಳದಿಂಗಳಂತ ಮಡಿಲಲ್ಲಿ ಒಂದು ಸಲ ಜೋರಾಗಿ ಅತ್ತು ಕಣ್ಣೀರಾಗಿ ಹಗುರಾಗಿ ನನ್ನ ತಪ್ಪುಗಳನ್ನೆಲ್ಲ ಹೇಳಿಕೊಳ್ಳಬೇಕನ್ನಿಸುತ್ತಿದೆ, ನೀನು ಕ್ಷಮಿಸುತ್ತೀಯೋ ಇಲ್ಲವೋ ಅನ್ನುವುದು ಬೇರೆ ಮಾತು, ಆದರೆ ನಾನು ಹಗುರಾಗಬೇಕು ಚೇತು, ಮತ್ಯಾವತ್ತೂ ಮೋಹದ ಬೆನ್ನು ಬೀಳಬಾರದೆಂದು ಅಂದುಕೊಂಡಾಗಿದೆ. ಮೋಹ ಅನ್ನೋದು ನನ್ನ ಪ್ರೀತಿಯ ಮೇಲೆ ನಡೆಸಿದ ದಬ್ಬಾಳಿಕೆ ಅಂದುಕೊಂಡು ಬಿಡು.
ನನಗೆ ಗೊತ್ತು ನನ್ನನ್ನ ಬಿಟ್ಟು ಬೇರೇನನ್ನೂ ನಿನ್ನಿಂದ ಕಲ್ಪಿಸಿಕೊಳ್ಳೋದಕ್ಕೂ ನಿನ್ನಿಂದ ಆಗದ ಮಾತು. ಅಷ್ಟು ಪ್ರೀತಿಸಿದ್ದೆ ನನ್ನ ಅದ್ಯಾವುದನ್ನೂ ಇನ್ನೂ ಮರೆತಿಲ್ಲ, ನನ್ನಿಂದ ಒಂದು ತಪ್ಪಾಗಿದೆ, ಅದಕ್ಕೆ ಸಾವಿರ ಸಲ ತಪ್ಪಾಯಿತು ಕ್ಷಮಿಸಿಬಿಡು ಅಂದುಕೊಂಡು ನಿನ್ನ ಮುಂದೆ ಮಂಡಿಯೂರಿ ಕುಳಿತು ಕ್ಷಮೆಯ ಬಿಕ್ಷೆ ಬೇಡೋಕೆ ಸಿದ್ಧವಾಗಿದ್ದೀನಿ. ಮತ್ತೆ ನಮ್ಮ ಹಳೆಯ ದಿನಗಳನ್ನ ಮರಳಿ ಪಡಿಯೋಣ, ಒಂದಷ್ಟು ಜಗಳವಾಡೋಣ, ಮುನಿಸಿಕೊಳ್ಳೋಣ, ಮತ್ತೆ ಮಾತು ಬಿಡೋಣ, ಮತ್ತೆ ರಾಜಿಯಾಗೋಣ, ಮತ್ತೆ ಜಗಳ ಮತ್ತೆ ರಾಜಿ, ಹಾಗೆ ಇಬ್ಬರೂ ಮತ್ತಷ್ಟು ಪ್ರೀತಿಸಿಕೊಳ್ಳೋಣ, ಈ ಪತ್ರದಲ್ಲಿ ನಿನ್ನ ಜೊತೆ ಕ್ಷಮೆ ಕೇಳೋದು ಒಂದು ಖುಷಿಯ ಸಂಗತಿಯಾದರೆ ನೀನು ಕ್ಷಮಿಸಬಹುದು ಅನ್ನೋದು ಮತ್ತೊಂದು ಖುಷಿಯ ಸಂಗತಿ. ನೀನು ಹಾಗೆಲ್ಲ ಬೆಣ್ಣೆಯ ಮಾತುಗಳಿಗೆ ಕರಗೋಳಲ್ಲ ಅನ್ನುವುದು ನನಗೆ ಗೊತ್ತು. ಅದಕ್ಕೇನೇ ನಿನಗೆ ತುಂಬಾ ಇಷ್ಟವಾದ ಢವ ಢವ ನಡುಕವ ಬಿಡು ನೀ ನಲ್ಲೇ ಅನ್ನುವ ನಿನಗೆ ಹಾಡನ್ನ ಮುನ್ನೂರ ಸಲ ಕೇಳಿಸುತ್ತೀನಿ. ಇದೇ ಸೋಮವಾರ ಮಹಲಕ್ಷ್ಮಿ ಲೇ ಔಟ್ ಆಂಜನೇಯ ದೇವಸ್ಥಾನದ ಕಂಬದ ಮರೆಯಲ್ಲಿ ನಿನಗಾಗಿ ಕಾಯುವುದು ಅಂತ ನಿರ್ಧಾರವಾಗಿದೆ. ನನ್ನ ಕೆನ್ನೆಗೆ ಮುತ್ತು ಕೊಡುವುದೋ ಅಥವ ಯಾವತ್ತೂ ಮರೆಯದ ಏಟು ಕೊಡುವುದೋ ಅನ್ನುವುದು ನಿನಗೆ ಬಿಟ್ಟ ನಿರ್ಧಾರ. ಮತ್ತೆ ಕೇಳಿಕೊಳ್ಳುತ್ತೇನೆ, ಪ್ಲೀಸ್ ಒಂದು ಸಲ ಮನ್ನಿಸಿಬಿಡು. ಅದಕ್ಕು ಮುಂಚೆ ಒಂದು ಮೆಸ್ಸೇಜ್ ಮಾಡು, ಒಂದು ವರ್ಷವಾಯಿತು ನಿನ್ನ ಮಮತೆಯ ಮೆಸೇಜಿಗೆ ಕಾದು ಕುಳಿತು.
ನವಿಲೂರ್ ಹುಡ್ಗ.
99868436–
ಇನ್ಯಾವತ್ತೂ ನಿನ್ನ ನೆನಪು ಮಾಡಿಕೊಳ್ಳಬಾರದೆಂದು ಅವುಡುಗಚ್ಚಿ ಕುಳಿತಿದ್ದೆ. ಮೊಬೈಲಿನ ಸಿಮ್ಮನ್ನ ಸುಮ್ಮನೆ ಕೈಗೆ ಸಿಗದಂತೆ ಎತ್ತಿಟ್ಟಿದ್ದೆ. ನೀನು ನನಗೆ ಕದ್ದು ಮುಚ್ಚಿ ಪಪ್ಪಿ ಕೊಟ್ಟು ಕಳುಹಿಸಿದ ಪತ್ರಗಳನ್ನ ಮುಚ್ಚಿಟ್ಟಿದ್ದೆ. ನೀನು ನೆನಪಾದ ಕೂಡಲೇ ಕಣ್ಣಂಚಲ್ಲಿ ಇಣುಕುವ ಒಂದಿಷ್ಟು ಹನಿಗಳನ್ನ ನನಗೇ ಕಾಣಿಸದಂತೆ ಬಚ್ಚಿಟ್ಟಿದ್ದೆ. ಪ್ರತಿ ದಿನ ಹಾದು ಹೋಗುವ ದಾರಿಯಲ್ಲೆಲ್ಲಾದರೂ ನಿನ್ನ ಕಪ್ಪು ಮುಖ ದರ್ಶನವಾದೀತೆಂಬ ಭಯ(?)ದಿಂದ ನನಗಿಷ್ಟದ ಬಸ್ ರೂಟ್ ಬದಲಿಸಿದ್ದೆ. ಪ್ರತಿ ಕ್ಷಣ ನಿನ್ನ ನೆನಪು ಮಾಡಿಕೊಳ್ಳುವ ನನ್ನ ಅಸಹಾಯಕತೆಯನ್ನ ನಾನೆ ಮೂದಲಿಸಿದ್ದೆ. ನಿನಗಿಷ್ಟವಾದ ಚೂಡಿದಾರ್ ಯಾವತ್ತೂ ಹಾಕಲಿಲ್ಲ, ನಿನ್ನಿಷ್ಟದ ಹಾಡನ್ನ ಮತ್ಯಾವತ್ತೂ ಗುನುಗಿಕೊಳ್ಳಲಿಲ್ಲ. ನೀನು ಕುಡಿಸಿದ ಲಿಂಬು ಷರಬತ್ತು, ನೀನು ತಿನ್ನಿಸಿದ ಅರುಣ್ ಐಸ್‌ಕ್ರೀಂ, ಪ್ರೀತಿಗೆ ತಂದುಕೊಟ್ಟ ಲಿಂಬೆಹುಳಿ ಚಾಕಲೇಟ್, ಮುರಿದು ಬಿದ್ದ ಟೆಂಟಿನೊಳಗೆ ನೀನು ನನಗೆ ಕೊಟ್ಟ ಮುವತ್ಮೂರು, ಮು….. !! ಕೃಷ್ಣ ಕೃಷ್ಣ ಯಾವುದನ್ನೂ ನೆನಪು ಮಾಡಿಕೊಳ್ಳುತ್ತಿಲ್ಲ ಈ ಹುಡುಗಿ.
ಕಾರಣವೇ ಇಲ್ಲದೇ ಇಷ್ಟವಾದವನು ನೀನು.ನಿನ್ನ ಪ್ರೀತಿಸಲು ಅಸಲು ನನಗೆ ಕಾರಣವೇ ಇರಲಿಲ್ಲ. ೧೯೯೭ ಮಾಡೆಲ್ ಹೀರೋ ಹೋಂಡ ಬೈಕಿನ ಕಪ್ಪು ಸುಂದರ?ನಿಗೆ ಫೆರಾರಿ ಕಾರಿನ ಚೆಲುವೆ ಒಲಿಯುವುದೆಂದರೆ ಸುಮ್ಮನೆ ಮಾತಾ? ಕಾಚರಕನಹಳ್ಳಿಯ ಸ್ಲಮ್ಮಿನ ಗುಡಿಸಿಲಿನ ಹೊಸ್ತಿಲೊಳಗೆ ಡಾಲರ್ಸ್ ಕಾಲೋನಿಯ ಕೋಟಿ ಬಂಗಲೆಯ ಹುಡುಗಿ ಕಾಲಿಡುವುದು ಅಂದರೆ ಸುಮ್ಮನೆ ಮಾತಾ? ಕೆ.ಎಫ್.ಸಿ, ಪಿಜ್ಜ ಬರ್ಗರ್ರು, ಕಾಫಿ ಡೇ, ಗರುಡಮಾಲ್‌ಗಳ ಕಾರಿಡಾರುಗಳಲ್ಲೇ ಕಾಲು ಸವೆಸುತ್ತಿದ್ದ ಮಲ್ಲಿಗೆ ಪಾದದ ಹುಡುಗಿ ವೆಂಕಟಪ್ಪನ ಪಾನಿಪೂರಿಗೆ ಜೊಲ್ಲು ಸುರಿಸುವುದು ಅಂದರೆ ಸುಮ್ಮನೆ ಮಾತಾ? ಫೆರಾರಿ ಕಾರಿಲ್ಲದೆ ಒಂದಡಿಯೂ ಮುಂದಿಡದಿದ್ದ ಗುಲಾಬಿ ಕೆನ್ನೆಯ ಹುಡುಗಿ ಬರಿಗಾಲಲ್ಲಿ ಹುಳಿಮಾವು ಅರಕೆರೆ ಕೊಳಚೆ ಸ್ಲಮ್ಮುಗಳಲ್ಲಿ ಒಂದಿಷ್ಟು ಅಳುಕಿಲ್ಲದೆ ನಿನ್ನ ಜೊತೆಗೂಡಿ ನಡೆದಾಡಿದ್ದು ಐತಿಹಾಸಿಕ ಘಟನೆಯಾಗುವುದಿಲ್ಲವೆ ಗೆಳೆಯ?
ಕಾಂಪ್ರೋಮೈಸಿಗೆ ಪಕ್ಕ ಉದಾಹರಣೆಯೆಂದರೆ ನಾನೆ ಅಲ್ಲವೆ ಗೆಳೆಯ? ನಂಬಿಕೆ ದ್ರೋಹಕ್ಕೆ ಇನ್ನೊಂದು ಹೆಸರೇ ನೀನೆ ಕರಿಯ..! ನನಗೆ ಗೊತ್ತಿಲ್ಲದ ಹಾಗೆ ಜರಗನಹಳ್ಳಿಯ ಡುಮ್ಮಿಯ ಜೊತೆ ಇಡೀ ಬೆಂಗಳೂರು ಸುತ್ತಿದ್ದು, ದೇವಯ್ಯ ಪಾರ್ಕಿನ ಮೂರಡಿ ಕುಳ್ಳಿಯ ಜೊತೆ ಕೈ ಕೈ ಹಿಡಿದು ನಡೆದಾಡಿದ್ದು, ಮಲ್ಲೇಶ್ವರಂ ಹದಿನೆಂಟನೇ ಕ್ರಾಸಿನ ಹುಡುಗಿಯ ಉದ್ದ ಕೂದಲಿಗೆ ಫಿದಾ ಆಗಿದ್ದು, ಎಂಟನೆಯ ಮೈಲಿಯ ನಲವತ್ತರ ಆಂಟಿಯನ್ನ ನೋಡಿ ಹಲ್ಕಿರಿದ್ದಿದ್ದು ಎಲ್ಲವನ್ನು ಬಲ್ಲೆ ಕರಿಯ. ಅಂದ, ಚಂದ, ಒನಪು, ವಯ್ಯಾರಕ್ಕೆಲ್ಲ ಹೆಚ್ಚು ಆಯುಷ್ಯವಿಲ್ಲ ಅನ್ನುವುದು ನಿನಗೆ ಯಾಕಾದರೂ ಗೊತ್ತಾಗ್ತಿಲ್ವೊ ? ಮುಂದೆ ಯಾವತ್ತಾದರೂ ಈ ಡಾಲರ್ಸ್ ಬೇಬಿಯ ನೆನಪು ಮಾಡಿಕೊಳ್ಳಬಹುದೆಂಬ ಸಣ್ಣ ನಂಬಿಕೆಯಲ್ಲಿ ಸ್ವಲ್ಪವೇ ಸ್ವಲ್ಪ ನಿನ್ನ ದ್ವೇಷಿಸುತ್ತ, ಹೆಚ್ಚು ಪ್ರೀತಿಸುತ್ತ ಮುಂದೆ ಹೋಗ್ತಿದ್ದೀನಿ.
ಬಣ್ಣ ಬದಲಿಸುವ ಹುಡುಗ ಹುಡುಗಿಯರ ಬಗ್ಗೆ ನನಗೆ ಹೆಚ್ಚು ತಿಳಿಯದು, ಆದರೆ ನಿಜವಾಗಿಯೂ ಪ್ರೀತಿಸುವ ಗೆಳೆಯ ಗೆಳತಿಯರ ಸಂಖ್ಯೆ ಯಾವತ್ತೂ ಮುಗಿಯದು. ನಿನ್ನ ಚಂಚಲ ಮನಸ್ಸು, ನಿನ್ನ ಹಸಿ ಹಸಿ ಸುಳ್ಳು, ಇವೆಲ್ಲವನ್ನೂ ಬದಿಗಿಟ್ಟು ಹೇಳಬೇಕೆಂದರೆ ಇನ್ನೂ ಕೂಡ ಇಷ್ಟೇ ಇಷ್ಟು ಪ್ರೀತಿ ನಿನ್ನೆಡೆಗುಳಿದಿದೆ. ಮುಂದೆ ಅದು ಹೆಮ್ಮರವಾದರೂ ಆಗಬಹುದು. ಸ್ವಾಭಿಮಾನಕ್ಕೆಲ್ಲ ತಿಲಾಂಜಲಿ ಬಿಟ್ಟು ನನ್ನ ಕರಿಯ ನನಗೆ ಬೇಕೂ ಅಂತಾನೆ ಕೊನೆಯ ಸಲ ಕೇಳ್ತ ಇದ್ದೀನಿ, ನನಗೆ ವೆಂಕಟಪ್ಪನ ಗಲೀಜು ಪಾನಿಪುರಿ, ಅರುಣ್ ಐಸ್‌ಕ್ರೀಂ, ಲಿಂಬುಹುಳಿ ಚಾಕಲೇಟ್,ಶುಂಟಿಪೆಪ್ಪರ್‌ಮೆಂಟು, ಬೇಕು. ಮತ್ತೆ ಮತ್ತೆ ಮತ್ತೆ ನನಗೆ ನನ್ನ ಹಳೆಯ ಕರಿಯ ಬೇಕು. ಪ್ಲೀಸ್ ಒಂದು ಸಲ ಸ್ಸಾರಿ ಕೇಳ್ತೀಯ? ಆ ಕ್ಷಣಕ್ಕೆ ನಿನ್ನವಳಾಗ್ತೀನಿ. ಮೆಸ್ಸೇಜ್ ಮಾಡು ಪ್ಲೀಸ್.
ನಿನ್ನ ನವಿಲೂರು ಹುಡುಗಿ.
9986843—
೧. ಪ್ರೇಮಲೋಕದ ಪಾಲಿನ ಅತ್ಯಂತ ಪವಿತ್ರ ಮಾತೆಂದರೆ, ನೀನಿಲ್ಲದೇ ಬದುಕುವುದಿಲ್ಲ ಅನ್ನುವುದಲ್ಲ, ಜೀವ ಬಿಡ್ತೀನಿ ಅನ್ನುವುದೂ ಅಲ್ಲ, ಬದಲಾಗಿ “ನೀನೇ ಹೇಳು ನೀನೇ ಹೇಳು” ಅನ್ನುವುದು.
೨. ನವಿಲೂರಿನ ಹುಡುಗಿಯೊಬ್ಬಳು ಯಾರನ್ನೋ ಮದುವೆಯಾಗಿ ಹೊಸ ಬದುಕಿನ ಹೊಸ್ತಿಲೊಳಗೆ ಒಂದು ಹೆಜ್ಜೆ ಇಡುತ್ತಿರುವಾಗಲೇ ಅದೇ ಊರಿನ ಮುಗ್ಧ ಹುಡುಗನೊಬ್ಬ ಬದುಕಿನಿಂದಾಚೆ ಹೆಜ್ಜೆಯಿಟ್ಟು ತುಂಬ ದಿನಗಳಾಗಿದ್ದವು.
೩. ಪ್ರೇಮಿಗಳ ಎದೆಗಳೊಳಗೆ ಕಾಮನೆಗಳು, ಬಯಕೆಗಳು, ಕನಸುಗಳು,ಹಲವಾರು ತುಡಿತ, ಕಣ್ಣೀರು ಸುಖ ಸಂತೋಷಗಳು ತುಂಬಿಕೊಳ್ಳುವುದರ ಜೊತೆಗೆ ಮಗುವೊಂದು ಮಲಗಿಕೊಳ್ಳಬೇಕಂತೆ.
೪. ಹೊಸದಾಗಿ ಮದುವೆಯಾಗಿದ್ದರು..! ಬೆಳಗ್ಗೆ ಎದ್ದ ಕೂಡಲೇ ಹುಡುಗ ಅವಳ ಮುಖ ನೋಡಬೇಕೆಂದುಕೊಂಡರೆ ಅವಳಿಲ್ಲ. ಕೋಪದಿಂದ ತುಳಸಿ ಪೂಜೆ ಮಾಡುತ್ತಿದ್ದವಳನ್ನ ಎಳೆದುಕೊಂಡು ಹೋಗಿ ತಬ್ಬಿಕೊಂಡು ಉಸಿರುಗಟ್ಟಿಸಿದ.
೫. ಯಾವತ್ತೂ ಕಣ್ಣೀರು ಹಾಕುವುದಿಲ್ಲವೆಂದು ಹುಡುಗನ ನೆತ್ತಿ ಮುಟ್ಟಿ ಪ್ರಾಮಿಸ್ ಮಾಡಿದ್ದಳು. “ನಿಂಗೆ ನನ್ ಮೇಲೆ ಸ್ವಲ್ಪಾನು ಪ್ರೀತಿಯಿಲ್ಲ” ಅಂತ ಹುಡುಗ ಅಂದಕೂಡಲೇ ಕಣ್ಣೀರಾಗಿದ್ದಳು.
೬. ಅವನಿಗೆ ಒಳ್ಳೆಯದಾಗಲಿ ಅಂತ ಪೂಜೆ ಮಾಡಿಸಲು ಸರತಿ ಸಾಲಿನಲ್ಲಿ ಅವಳು ನಿಂತಿದ್ದಳು. ಮಧ್ಯಾಹ್ನವಾದರೂ ಅವಳ ಸರದಿ ಬರಲಿಲ್ಲ. ಅವನ ನೆನಪಾಗಿ ಮನೆಗೆ ಹೋದವಳ ಮೇಲೆ ದೇವರು ಮುನಿಸಿಕೊಂಡ. ಆದರೆ ಅವನು ಮುದ್ದಿಸಿದ.
೭. ಪ್ರೀತಿಯ ಲೋಕದ ಜಗಳ, ಮುನಿಸು,ಕೋಪ,ವಿರಹ,ಕಣ್ಣಿರು ಇವುಗಳ ಅಂತ್ಯ ಸಂಸ್ಕಾರಕ್ಕೆ “ನಾಳೆ ಸಿಕ್ತೀನಿ ಬಿಡು” ಅನ್ನುವ ಮಾತೆ ಉತ್ತಮ ಪುರೋಹಿತನಂತೆ.
೮. ಅವನು ಸಂಜೆ ಅವಳ ಮುಡಿಗೆ ಮಲ್ಲಿಗೆ ತರುವುದನ್ನ ಮರೆತಂತೆ ನಾಟಕವಾಡಿದ. ಆದರೆ ಅವಳು ಅವನ ತಬ್ಬಿಕೊಳ್ಳದೇ ನಾಟಕವಾಡಲು ಮನಸ್ಸಾಗಲಿಲ್ಲವಂತೆ.
೯. ಊಟಕ್ಕೆ ಕುಳಿತಿದ್ದ ಪ್ರೇಮಿಗಳಿಬ್ಬರಿಗೆ ಬಿಕ್ಕಳಿಕೆ ಶುರುವಾಯಿತು.ಸ್ನೇಹಿತರು ತಲೆಯ ಮೇಲೆ ಮೊಟಕಿದರು, ನೀರು ಕುಡಿಸಿದರು, ಬಿಕ್ಕಳಿಕೆ ನಿಲ್ಲಲಿಲ್ಲ. ಆದಷ್ಟು ಬೇಗ ಇಬ್ಬರ ಮದುವೆಗೆ ಪುರೋಹಿತರನ್ನ ಹುಡುಕುವ ಬಗ್ಗೆ ಒಂದೆರೆಡು ಮಾತನಾಡಿದ ಕೂಡಲೇ……….!!!
೧೦. ಹುಡುಗಿ ಯಾವುದೋ ಧ್ಯಾನದಲ್ಲೋ ಇನ್ಯಾರದೋ ನೆನಪಿನಲ್ಲೋ ಅರಳಿಕಟ್ಟೆಗೆ ಮೂರು ಸುತ್ತು ಹಾಕುತ್ತಿದ್ದಳು. ಅರಳಿಕಟ್ಟೆಯ ಮುಂದೆ ಚಪ್ಪಲಿ ಹೊಲೆಯುತ್ತ ಕುಳಿತಿದ್ದ ಅವನು ಅವಳ ಸುತ್ತಿದ್ದಕ್ಕೆ ಲೆಕ್ಕವಿನ್ನು ಸಿಕ್ಕಿಲ್ಲ.
( ವಿಜಯ ಕರ್ನಾಟಕ ಪತ್ರಿಕೆಯ ಫೆಬ್ರವರಿ ೧೪, ಸಿಂಪ್ಲಿ ಸಿಟಿ ಪೇಜ್, ಪ್ರೇಮಿಗಳ ದಿನದ ವಿಷೇಶಾಂಕಕ್ಕೆ ಸುಮ್ಮನೆ ಗೀಚಿದ್ದು)

ಮರಾಠಿ ಹುಡ್ಗಿಗೆ
ಪ್ರೀತಿ, ಎಲ್ಲ ಬಾಷೆ ಧರ್ಮಗಳನ್ನ ಮೀರಿದ್ದು ಅಂತ ತುಂಬಾನೆ ಓದ್ತಾನೆ ಇರ್ತೀವಿ ಅಲ್ವ ? ನಮ್ಮ ಜೀವನದಲ್ಲೂ ಇದು ನಿಜಾನೆ ಆಗುತ್ತೆ ಅಂತ ಕನಸಲ್ಲಾದ್ರೂ ಕನವರಿಸಿದ್ವಾ? ಇಲ್ಲ ಅಲ್ವ? ಇಬ್ಬರ ಪ್ರೀತಿಯ ಬಳ್ಳಿ ಎತ್ತರೆತ್ತರಕ್ಕೆ ಹಬ್ಬುತ್ತಲೇ ಹೋಯ್ತು, ಆ ದೇವರ ಕೆಟ್ಟ ಕಣ್ಣು ಬೀಳುವವರೆಗು. ನೀನು ನನ್ನ ಜೊತೆ ಮುನಿಸಿಕೊಂಡ ದಿನದಿಂದ, ನಿನ್ನ ಎಲ್ಲ ಮಾತುಗಳೂ ನಿಂತ ನಂತರ, ಅಂತಹ ದೊಡ್ಡ ಅನಾಹುತಗಳೇನು ನಡೆದಿಲ್ಲ. ಕಣ್ಣುಗಳು ಕನಸು ಕಾಣೋದನ್ನ ನಿಲ್ಲಿಸಿವೆ, ನಾನು ಪಡೆದುಕೊಂಡು ಬಂದಿದ್ದಿಷ್ಟೆ ಅಂತ ಈ ಹೃದಯ ತನ್ನನ್ನ ತಾನೆ ಸಂತೈಸಿಕೊಳ್ಳುತ್ತಿದೆ, ಬಣ್ಣ ತುಂಬಿದ್ದ ಬದುಕಿನ ಪುಟಗಳಲ್ಲಿ ಈಗ ನಿನ್ನ ಯಾವ ಸಾಲುಗಳೂ ಉಳಿದಿಲ್ಲ ಅಳಿಸಿಹೋಗಿವೆ, ಮತ್ತೆ ನಿನ್ನ ಕುರಿತು ಒಂದಿಷ್ಟು ಸಾಲುಗಳನ್ನ ಬರೆಯಬೇಕು, ನೆನಪುಗಳನ್ನ ತೆಗೆದುಕೊಂಡು ಹೋಗಿ ಕುಳಿತಿದ್ದೀಯ ಹ್ಯಾಗೆ ಬರಿಯೋದು? ಅದ್ಕೆ ಪೂರ್ತಿ ಮರ್ತುಬಿಟ್ಟಿದ್ದೀನಿ ನಿನ್ನ, ನೀನು ನನಗೆ ಸ್ವಲ್ಪವೂ ನೆನಪಾಗೊಲ್ಲ, ಎಲ್ಲ ನೆನಪುಗಳಿಗೂ ಸಮಾಧಿ ಕಟ್ಟಿಬಿಟ್ಟಿದ್ದೀನಿ,ಯಾವತ್ತೂ ನಿನ್ನ ನೆನಪು ಮಾಡ್ಕೊಳ್ಳೊಲ್ಲ, ನಿನ್ನ ಹೆಸರಿಡಿದು ಒಂದೇ ಒಂದು ಸಲ ಕರಿಯೋಕು ನನಗೆ ಮನಸ್ಸಾಗ್ತಿಲ್ಲ, ಹೋಗ್ಬಿಡು ತುಂಬಾನೆ ದೂರ, ಮತ್ಯಾವತ್ತೂ ನೆನಪಿಗೆ ಬರಲೇಬಾರದು ನೀನು. ತುಂಬಾನೆ ಸುಳ್ಳು ಹೇಳ್ತಿದ್ದೀನಿ ಅಲ್ವಾ? ನೀನು ನನಗೆ ತಿನ್ನಿಸಿದ ಕೈತುತ್ತು, ಮತ್ತು ನೀನು ನನಗೆ ಕೊಟ್ಟ ಅಷ್ಟೂ ಹೂಮುತ್ತುಗಳ ಮೇಲಾಣೆ, ನಿನ್ನ ಮರೆತುಬಿಟ್ಟಿದ್ದೀನಿ ಅಂತ ಸುಳ್ಳು ಹೇಳೋಕ್ ಕೂಡ ತುಂಬ ಕಷ್ಟ ಆಗ್ತಿದೆ ಕಣೆ.
ಈ ಎದೆಯಲ್ಲಿ ಪ್ರೀತಿಯ ಬಳ್ಳಿಯನ್ನ ನೆಟ್ಟು ಮತ್ಯಾರದೋ ಹೃದಯ ಸಾಮ್ರಾಜ್ಯದಲ್ಲಿ ಮಹರಾಣಿಯಾಗಿ ಮೆರೆಯೋ ಸಣ್ಣ ಮನಸ್ಸಿನವಳಲ್ಲ ನೀನು ಅನ್ನೋದು ನನಗೆ ಗೊತ್ತಿದೆ ಪುಟ್ಟ. ನಾನು ಕ್ಷಣಕ್ಷಣಕ್ಕೂ ನೆನಪಾಗ್ತಿದ್ದೀನಿ ಅಲ್ವಾ? ನ್ನ ಜೊತೆ ಮತ್ತೆ ಮಾತಾಡೋಕೆ ನಿನಗೆ ಒಂದು ಸಣ್ಣ ಸ್ವಾಭಿಮಾನ ಅಡ್ಡ ಬರ‍್ತಿದೆ ಅಲ್ವೇನೆ? ಬಿಟ್ಟುಬಿಡು ಕಂದ, ನೋಡು ಮಹಾನ್ ಸ್ವಾಭಿಮಾನಿಯಾದ ನಾನು ಎಲ್ಲದಕ್ಕೂ ತಿಲಾಂಜಲಿ ಬಿಟ್ಟು ನಿನ್ನ ಜೊತೆ ಮಾತಿಗಿಳಿದಿದ್ದೀನಿ, ನಿಂಗೆ ಮಾತ್ರ ಯಾಕೆ ಸಾಧ್ಯವಾಗೊಲ್ಲ ಹೇಳು? ಆದ್ರೂ ತುಂಬಾನೆ ದೂರ ಹೋಗ್ಬಿಟ್ಟೆ ಅಲ್ವಾ? ತುಂಬಾನೆ ದೂರ ಮಾಡ್ಬಿಟ್ಟೆ ಅಲ್ವಾ? ನಿಜ್ಜಾ… ನಂಗೆ ತುಂಬಾನೆ ಭಯ ಆಗ್ತಿದೆ, ಆವಾಗ್ಲೆಲ್ಲ ನೀನು ನನ್ನ ನೆತ್ತಿ ಮುಟ್ಟಿ ಮಾಡಿದ ಆಣೆ ಪ್ರಾಮಾಣಗಳೇ, ನನಗೆ ನೀನು ಮತ್ತೆ ಸಿಕ್ತೀಯ, ಮತ್ತೆ ಬೆಂಗಳೂರಿನ ಗಾಂಧಿ ಬಜಾರಿನ ಎಲ್ಲ ಕತ್ತಲೆಯ ಮೂಲೆಗಳು ನಾಚಿಕೊಳ್ಳುವಂತೆ ತಬ್ಬಿಕುಳಿತುಬಿಡ್ತೀಯಾ ಅನ್ನೊ ನಂಬಿಕೆಯನ್ನ ತರಿಸುತ್ತಿವೆ .
ನಿಂಗೆ ಗೊತ್ತಾ? ನೀನು ಮಾತು ನಿಲ್ಲಿಸಿದ ಮೇಲೆ ನನ್ನ ಮೊಬೈಲು ಕೂಡ ನನ್ನ ಜೊತೆ ಮುನಿಸಿಕೊಂಡು ಕುಳಿತಿದೆ. ಎಸ್ಸೆಮ್ಮೆಸ್ಸುಗಳಿಗೆ ಭಯಂಕರ ಜ್ವರ ಕಣೆ. …..೯೩೧೫ ಈ ನಂಬರಿನಿಂದ ಬರುವ ಒಂದು ಕಾಲ್ ಒಂದು ಮೆಸ್ಸೇಜಿಗಾಗಿ ನನ್ನ ಮೊಬೈಲಿನ ಜೊತೆ ನಾನು ಜೀವವನ್ನ ಕೈಯ್ಯಲ್ಲಿಟ್ಟುಕೊಂಡು ಕುಳಿತಿದ್ದೀನಿ, ನೋಡು ಕಂದ, ನಮ್ಮ ಹಳೆಯ ಕೆಲವು ಬಿನ್ನಾಭಿಪ್ರಾಯಗಳಿಗೆ ಒಂದು ಗತಿ ಕಾಣಿಸೋಣ, ನೀನು ಮಾಡಿದ ಪ್ರೀತಿಯ ಎಲ್ಲ ತಪ್ಪು ಒಪ್ಪುಗಳನ್ನ ಪ್ರೀತಿಯಿಂದಾನೆ ಕ್ಷಮಿಸಿಬಿಡ್ತೀನಿ, ಮರೆತುಬಿಡ್ತೀನಿ. ನನ್ನದಲ್ಲದ ತಪ್ಪು ಒಪ್ಪುಗಳಿಗೆ ನಾನಾಗೆ ನಿನ್ನ ಮುಂದೆ ಮಂಡಿಯೂರಿ ತಲೆತಗ್ಗಿಸಿ ಕುಳಿತುಬಿಡ್ತೀನಿ ಕ್ಷಮಿಸ್ತೀಯ ಅನ್ನೋ ಭರವಸೆಯಿಂದ. ನೀನು ಕೆಟ್ಟವಳಲ್ಲ, ಆದ್ರೆ ತುಂಬಾ ಚಿಕ್ಕವಳು. ಜಗತ್ತಿನಲ್ಲಿ ಚಿಕ್ಕವರು ಮಾಡಿದ ತಪ್ಪುಗಳಿಗೆ ಕ್ಷಮೆಗಳು ಇರುತ್ತೆ ಅಲ್ವಾ? ಇನ್ನು ನನ್ನ ಮರಾಠಿ ಪುಟ್ಟಿ ಮಾಡಿದ ತಪ್ಪುಗಳಿಗೆ ಕ್ಷಮೆಯ ಜೊತೆ ನನ್ನ ಪ್ರೀತಿಯೂ ಇರತ್ತೆ. ಮುನಿಸಿಕೊಂಡ ನಿನ್ನ ಮೂತಿಯನ್ನ ನೋಡೋಕೆ ಇಷ್ಟ ಆಗೊಲ್ವೆ. ಎಲ್ಲಿ ಒಂದು ಹತ್ತು ಸಲ ನಗು ನೋಡೋಣ? ಇಪ್ಪತ್ತು ಮೊಳ ಮಲ್ಲಿಗೆ ಹಿಡಿದು ಅದೇ ಗಾಂಧಿ ಬಜಾರಿನ ಕತ್ತೆಲೆಯ ಮೂಲೆಯಲ್ಲಿ ಜೀವನ ಪೂರ್ತಿ ಜೊತೆಗಿರುವ ನಂಬಿಕೆಯೊಂದಿಗೆ ನಿಂತಿರ್ತೀನಿ. ಮತ್ತೊಮ್ಮೆ ಪೂರ್ತಿ ಗಾಂಧಿ ಬಜಾರು ನಾಚಿಕೊಳ್ಳಲಿ ಬಿಡು, ನಗೆ ನೀನು, ನಿನಗೆ ನಾನು, ನಮಗಿಬ್ಬರು.
ಇಂತಿ ನಿನ್ನ ಪ್ರೀತಿಯ
ಕನ್ನಡ ಹುಡ್ಗ !
ಕವಿತೆಯ ಕೊನೆಯ
ಸಾಲಿನ ಬಳಿಕ,
ಸಂಜೆ ಕತ್ತಲಿನ ಕೊನೆಗೆ
ಮಾತುಗಳೆಲ್ಲ ಮುಗಿದ ನಂತರ
ಎಲ್ಲರ ಹಾರೈಕೆಗಳೂ ತೀರಿದ ತಕ್ಷಣ
ನೆನಪಾಗು.. ಬದುಕು ಮುಂದುವರಿಯಬೇಕು.
———————————————
ಮುಳುಗಲಿ ಜಗತ್ತು
ತೊಲಗಿ ಹೋಗಲಿ ಬೆಳಕು
ಆರಲಿ ಬಿಡು ದೀಪ
ನಾಶವಾಗಿ ಹೋಗಲಿ ಸುಖ ಸಂತೋಷ
ನಾನು ನಿನ್ನ ಮಡಿಲಲ್ಲಿರುವೆ.
——————————————————
ಅಲ್ಲಿ ಹರಿದ ತಾಯ ಸೆರಗಿತ್ತು
ಅಲ್ಲಿ ಅವಳ ಬಿರಿದ ಎದೆಯ
ಸುಂದರ ಬೆರಗಿತ್ತು.
ಹುಡುಗ ತಾಯ ಸೆರಗ ಹೊಲೆದುಕೊಟ್ಟ.
——————————————————–
ಅವನಿಗೆ ಕಾಯುತ್ತಿದ್ದ ಅವಳ
ನೆತ್ತಿಯ ಮೇಲೆ ದಶಕಗಳೆ
ಉರುಳಿ ತೆರಳಿ ಹೋಗಿದ್ದರೂ,
ಅವಳ ಎದೆಯ ಒಳಗೆ ಈಗಲೂ
ಅವನ ಪ್ರೀತಿಯ ಎರಡು ಸಾಲಿನ
ಕವಿತೆಳು ಜೀವ ತಳೆಯುತ್ತಲೇ ಇವೆ.
———————————————————-
ಜಗತ್ತು ಅವಳನ್ನು
ಹುಡುಕುತ್ತಿತ್ತು.
ಯಾರ ಕಣ್ಣಿಗೂ ಬೀಳದೆ
ಕವಿತೆಯೊಳಗಡಗಿ ಕುಳಿತಿದ್ದಳು
ನನ್ನಿಂದ ತಪ್ಪಿಸಿಕೊಳ್ಳಲಾಗಲಿಲ್ಲ.
——————————————————–
ಹಸಿವಿನಿಂದ ಹೊರಗೆ
ಕತ್ತಲಲ್ಲಿ ಮಲಗಿದ್ದ ಕೋಟ್ಯಾಂತರ
ಜನರ ಮೇಲೆ ಬೆಳದಿಂಗಳ ಸುರಿಸಿದ
ಚಂದಿರ, ಅವರ ಹಸಿವ ನೀಗಿಸಲಾರದ
ಅಸಾಹಾಯಕತೆಗೆ ಹನಿಗೂಡಿದ್ದಾನೆ.
————————————————————-
ಅವಳ ಕೈ ಹಿಡಿದುಕೊಂಡ
ಅವನ ಸಮಸ್ತ ಖುಷಿಗಿಂತ
ಹಿಡಿದ ಹಿಡಿತ ಸಡಿಲಾಗಬಾರದು
ದೇವರೆ ಎಂದು ಬೇಡಿಕೊಂಡ
ಪರಿ ದೊಡ್ಡದಿದೆ.
—————————————————————
ಪ್ರಪಂಚದ ಅತ್ಯುತ್ತಮ
ಚಿತ್ರಕಾರರೆಲ್ಲರೂ ಚಿತ್ರಿಸಿದ
ಚಿತ್ರಿಕೆಗಳೆಲ್ಲವೂ,
ನನ್ನ ಕಪ್ಪು ಬಿಳುಪು ಸುಂದರಿಯ ಹಳೆಯ
ಫೋಟೋದ ಮುಂದೆ ತಲೆ ತಗ್ಗಿಸಿವೆ.
————————————————————
ಹತ್ತು ಮಮತೆ,
ನೂರು ನಂಬಿಕೆ,
ಸಾವಿರ ಪ್ರಾಮಾಣಿಕತೆ,
ಸಾವಿರಾರು ಪ್ರೀತಿ ಪ್ರೇಮಗಳ
ಜೊತೆ ನನ್ನವನನ್ನ ತೂಗಿದ
ತಕ್ಕಡಿಯ ಭಾಗ
ಯಾವತ್ತೂ ಕೆಳಗೇ ಇರುತ್ತದೆ
————————————————————-
ನಾನು ಕೇಳಿದ ಅಷ್ಟೂ
ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರಿಸದ
ನಿನ್ನ ಪ್ರಮಾದಕ್ಕೆ ಒಂದು ಮುತ್ತನ್ನು
ಕೊಡಬೇಕೆಂಬ ಕಠಿಣ ಸಜೆಯನ್ನ ವಿಧಿಸುತ್ತಿದ್ದೇನೆ.
( ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ)
ಸೂರಜ್ ಎಂಬ ಗೆಳೆಯನಿಗೆ
ನಾವಿಬ್ಬರೂ ಪ್ರೀತಿಯಿಂದ, ಅಷ್ಟೇ ಮಮತೆಯಿಂದ, ಅಷ್ಟೇ ಸಂಯಮದಿಂದ ಕಟ್ಟಿದ ಪ್ರೀತಿಯ ಅರಮನೆಯಿಂದ ನಾನು ನಿನಗೆ ಹೇಳದೆ ಕೇಳದೇ ಹೊರನಡೆದ ನನ್ನ ತಪ್ಪನ್ನ ಮನ್ನಿಸಿಬಿಡು. ನಿನ್ನೆದೆಯೊಳಗಿನ ಅಷ್ಟೂ ಮಮತೆಗೆ ಘೋರಿ ಕಟ್ಟಿದ ನನ್ನ ಅಸಹಾಯಕತೆಯನ್ನ ಮನ್ನಿಸಿಬಿಡು. ನಿನ್ನ ಜೊತೆ ಕೊನೆಯವರೆಗೂ ಬರಲಾರದ ಈ ಹೆಜ್ಜೆಗಳ ತಪ್ಪನ್ನ ಮತ್ತೊಮ್ಮೆ ಮನ್ನಿಸಿಬಿಡು. ನಿನಗಿಟ್ಟ ಸಾವಿರಾರು ಆಣೆ ಪ್ರಮಾಣಗಳನ್ನ ಒಂದೇ ಸಲ ಸುಳ್ಳಾಗಿಸಿದ ಈ ಗೆಳತಿಯನ್ನ ಮತ್ತೊಮ್ಮೆ ಮನ್ನಿಸಿಬಿಡು. ಪ್ರಪಂಚದಲ್ಲಿರುವ ಎಲ್ಲ ಪ್ರೇಮಕಥೆಗಳನ್ನ ನಿನ್ನ ಭುಜಕ್ಕೊರಗಿ ಓದಿ ಹೇಳುತ್ತಾ, ಕೊನೆಗೆ ನಮ್ಮ ಪಾಲಿನ ಪ್ರೇಮದ ಪುಸ್ತಕದಲ್ಲಿ ಒಂದೇ ಒಂದು ವಾಕ್ಯವನ್ನೂ ಬರೆಯದೇ ಎದ್ದು ಹೊರಟು ಬಂದ ಈ ನಿನ್ನ ಹುಡುಗಿಯನ್ನ ಕೊನೆಯ ಸಲ ಕ್ಷಮಿಸಿಬಿಡೋ ಪ್ಲೀಸ್.
ನಿನ್ನ ಕುರಿತಾಗಿ ಅದೆಷ್ಟು ಕನಸುಗಳನ್ನ ಕಂಡಿದ್ದೆನೋ ಕಣೊ. ಹಾಳಾದ್ದು ಕೊನೆಗೂ ಒಂದೂ ನೆಪಮಾತ್ರಕ್ಕಾದರೂ ನನಸಾಗಲಿಲ್ಲ. ಅಷ್ಟು ಕನಸುಗಳ ಮೇಲೆ ನೆಪ ಮಾತ್ರಕ್ಕಾದರೂ ಅಷ್ಟೊಂದು ದೇವರುಗಳ ಒಂದೇ ಒಂದು ಆಶೀರ್ವಾದ ಬೀಳಲಿಲ್ಲ. ಬೇಡಿಕೊಂಡ ಒಂದೇ ಒಂದು ಕನಸು ನನಸಾಗಿದ್ದರೂ ನಾನು ನಿನ್ನ ಮಡಿಲಲ್ಲಿರುತ್ತಿದ್ದೆ. ತಬ್ಬಿಕೊಂಡು ನಿನ್ನ ಉಸಿರುಗಟ್ಟಿಸುತ್ತಿದ್ದೆ, ನಮಗೆ ಹುಟ್ಟಲಿರುವ ಮಗುವ ಹೆಸರ ಇಡೋದಕ್ಕೆ ನಿನ್ನ ಜೊತೆ ಜಗಳಕ್ಕೆ ಬೀಳುತ್ತಿದ್ದೆ, ಸುಮ್ಮನೆ ಮುನಿಸಿಕೊಳ್ಳುತ್ತಿದ್ದೆ, ನಾನೆ ಸ್ಸಾರಿ ಕೇಳುತ್ತಿದ್ದೆ. ಎಲ್ಲಾ ಕನಸು ಕಣೊ. ಇದೆಲ್ಲ ನೋಡಿದ್ರೆ ಏನ್ ಅನ್ಸುತ್ತೆ ಗೊತ್ತಾ? ಪ್ರಪಂಚದ ಅತ್ಯಂತ ದುರದೃಷ್ಟ ಪ್ರೇಮಿಗಳಲ್ಲಿ ನಾವೆ ಮೊದಲ ಸಾಲಿನಲ್ಲಿ ನಿಲ್ಲೋರು ಅಲ್ವೇನೊ?
ಬದುಕು ಒಂದೊಂದು ಸಲ ತುಂಬಾ ಕ್ರೂರಿ ಅನ್ನಿಸಿಬಿಡುತ್ತೆ. ಇಲ್ಲಿ ನಮ್ಮಂತವರ ಪ್ರೀತಿ ಗುಣಿಸಿಕೊಳ್ಳೋದಿಲ್ಲ. ಕೇವಲ ಕಳೆದುಕೊಳ್ಳುತ್ತದೆ. ಕೆಲವು ಬಿಡಿಸಲಾರದ ಬಂಧನಗಳ ಸಂಕೋಲೆಗಳು ಒಂದು ನಿರ್ಮಲವಾದ ಪ್ರೀತಿಯನ್ನ ಬಂಧಿಸಿಬಿಡುತ್ತವೆ. ನನ್ನಂತ ಸೆಂಟಿಮೆಂಟಲ್ ಹುಡುಗಿಯರು ಬಂಧನದಿಂದ ಬಿಡಿಸಿಕೊಳ್ಳಲಾರದೆ ಕಣ್ಣೀರಿಡುತ್ತಾರೆ. ಹುಡುಗಿಯರೆಂದರೇ ಬರಿ ಕೈ ಕೊಡೋರು ಅನ್ನುವ ಮಾತಿಗೆ ಮತ್ತಷ್ಟು ಪುರಾವೆ ಒದಗಿಸುತ್ತಾರೆ. ಒಂದಷ್ಟು ಧೈರ್ಯ ತೆಗೆದುಕೊಂಡು ಒಂದಡಿ ಮುಂದೆ ಹೆಜ್ಜೆಯಿಟ್ಟರೂ ಕಾಣದ ಕೈಗಳು ಮತ್ತಷ್ಟು ಹಿಂದಕ್ಕೆಳೆಯುತ್ತವೆ. ಬದುಕು ಅಂದ್ರೆ ಕಾಂಪ್ರೋಮೈಸ್ ಅಂದ್ಕೊಂಡಿದ್ದೆ. ಆದರೆ ಇಷ್ಟೊಂದು ಅಂತ ನಿನ್ನಾಣೆ ಅಂದ್ಕೊಂಡಿರಲಿಲ್ಲ. ನನ್ನ ಮುಂದಿದ್ದು ಎರಡು ಆಯ್ಕೆ ಕಣೊ.. ಅಪ್ಪ ಅಮ್ಮ ಮತ್ತು ನೀನು. ನಾನು ಮೊದಲನೆಯದನ್ನ ಆಯ್ದುಕೊಂಡು ಮುದ್ದಿನ ಮಗಳು ಅನ್ನಿಸಿಕೊಂಡರೂ ಪ್ರೇಮ ಲೋಕದ ಪಾಲಿಗೆ ಕೈ ಕೊಟ್ಟವಳು ನಂಬಿಕೆ ದ್ರೋಹಿ ಅನ್ನಿಸಿಕೊಳ್ತಾನೆ ನಿನ್ನ ಮನದ ಗುಡಿಯಿಂದ ಎದ್ದು ಹೋಗ್ತಾ ಇದ್ದೀನಿ.. ಪ್ಲೀಸ್ ನೀನು ನನ್ನ ಪ್ರೀತಿಸಿದ್ದು ನಿಜವೇ ಆದರೇ ನನ್ನನ್ನ ಕೊನೆಯ ಬಾರಿಗೆ ಕ್ಷಮಿಸಿ ಬಿಡು.
ನಿನ್ನ ಪೂಜಿತ
ಮೊದಲು ತೊದಲುತ್ತ ಬೆರೆದಿದ್ದ
ಬರೆಯಲಾರದೆ ಬಿಕ್ಕಿ ಅತ್ತಿದ್ದ
ಎರಡು ಸಾಲು ಬರೆಯಲೂ
ಲೆಕ್ಕವಿಲ್ಲದಷ್ಟು ನೆನಪು ಮಾಡಿಕೊಂಡು
ಅರ್ದ ಬರೆದಿಟ್ಟಿದ್ದ ಕವಿತೆ ಕಳೆದು ಹೋಗಿದೆ.
ಅಲ್ಲಿ ಬರೆದ ಒಂದು ಸಾಲು
ಒಂದಕ್ಷರ ಏನೆಂದರೇನೂ ನೆನಪಿಲ್ಲ
ಅಲ್ಲಿ ನಾನು ಬರೆದ ಸಾಲುಗಳಿಗಿಂತ
ಬರೆಯದೇ ಉಳಿಸಿಕೊಂಡ ಸಾಲಿನ
ಸಾಲ ತೀರಿಸಲಾರದ ಕವಿತೆ ಕಳೆದುಹೋಗಿದೆ.
ಅವಳು ನನಗಂತಲೇ
ಬಿಟ್ಟು ಹೋದ ಎಂದೂ
ಮುಗಿಯದ ವಿರಹವನ್ನು
ಕೇವಲ ಮೂರು ಸಾಲುಗಳಲ್ಲಿ ಬರೆದ
ಕವಿತೆ ಕಳೆದು ಹೋಗಿದೆ.
ಅವಳೊಂದಿಗೆ ಕಳೆದ
ಕೆಲವೇ ಕೆಲವು ಕ್ಷಣಗಳನ್ನ
ನನ್ನಿಡೀ ಬದುಕಿಗೆ ವಿಸ್ತರಿಸಿಕೊಂಡ
ಕೆಲವು ಮಾಯಾವಿ ಸಾಲುಗಳ
ಕವಿತೆ ಕಳೆದು ಹೋಗಿದೆ.
ನನಗೆ ಬೆನ್ನು ಮಾಡಿ
ಹೊರಟು ಹೋದವಳ
ಮೊಗದಲ್ಲಿ ಮೂಡಿದ
ಸಣ್ಣ ನಗೆಯನ್ನೂ
ಪ್ರೀತಿಸಿ ಬರೆದ ಸಾಲುಗಳ
ಕವಿತೆ ಕಾಣೆಯಾಗಿದೆ.
ತಾಯಿ ಮತ್ತು ದೇವರು ಹಾಗು
ಅವಳು ಸಮನಾರ್ಥಕ ಪದಗಳೆಂದು
ಹೇಳಿ ನನೊಳಗೆ ಸುಖಿಸಿದ
ಸಾಲುಗಳ ಕವಿತೆ ಕಳೆದು ಹೋಗಿದೆ.
ದೂರಾಗುವ ಮಾತು ನೀನಾಡಿದ
ಕೂಡಲೇ ನಾನು ನಿನ್ನ ಕಾಲಿಗೊರಗಿ
———————-
———————-
ಆ ಕವಿತೆ ಕಳೆದು ಹೋಗಿದೆ
ಬದುಕು ಮುಂದುವರಿಯಬೇಕಿದೆ
ಕವಿತೆ ಬೇಕಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ